ಮಡಿಕೇರಿ, ಜೂ. ೩೦: ಹೊರಗಿನವರು ಕೊಡಗಿನಲ್ಲಿ ಜಾಗ ಖರೀದಿಸದಂತೆ ತಡೆಯಲು ಅಗತ್ಯವಾದ ಕಾನೂನನ್ನು ಜಾರಿಗೊಳಿಸುವಂತೆ ಕೊಡಗು ಮತ್ತು ಕಾವೇರಿ ಸಂರಕ್ಷಣಾ ವೇದಿಕೆ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಲ್ಮದಂತಹ ಪ್ರಕರಣಗಳು ಕೊಡಗಿನಲ್ಲಿ ಮರುಕಳಿಸಬಾರದು. ಇಲ್ಲಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದು. ಭವಿಷ್ಯದಲ್ಲಿ ಕೊಡಗಿನಲ್ಲಿ ಭೂಮಿ ಖರೀದಿಸಲು ಹೊರಗಿನವರು ಪ್ರಯತ್ನಗಳನ್ನು ಮಾಡಬಹುದು. ಆದ್ದರಿಂದ ಹೊರಗಿನವರು ಭೂಮಿ ಖರೀದಿಸುವುದನ್ನು ತಡೆಯಲು, ಜಮ್ಮಾ ಅಲ್ಲದ ಮತ್ತು ಕೊಡಗಿನ ಸ್ಥಳೀಯ ಸಮುದಾಯಗಳಿಗೆ ಸೇರದ ಜನರಿಗೆ ಭೂಮಿ ಮಾರಾಟ ಮಾಡುವುದನ್ನು ತಡೆಯುವ ಕಾನೂನನ್ನು ಜಾರಿಗೊಳಿಸಬೇಕು.

ಭಾರತದ ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮತ್ತು ಹಿಮಾಲಯ ಪ್ರದೇಶ ಮತ್ತು ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿದ್ದು, ಕೊಡಗಿಗೂ ಇಂತಹ ಕಾನೂನಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಮಂತರ್ ಗೌಡ ಮತ್ತು ಸಂಸದ ಯದುವೀರ್ ಅವರುಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಕಾನೂನು ಜಾರಿಗೆ ಬರುವವರೆಗೆ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಕೊಡಗಿನಲ್ಲಿರುವ ದಲ್ಲಾಳಿಗಳು ಹೆಚ್ಚಿನ ಕಮಿಷನ್‌ಗಾಗಿ ಹೊರಗಿನವರು ಭೂಮಿ ಖರೀದಿಸಲು ಪ್ರೋತ್ಸಾಹಿಸಬಾರದು ಹಾಗೂ ಕೊಡಗು ಮತ್ತು ಕಾವೇರಿ ನದಿಯನ್ನು ರಕ್ಷಿಸಲು ಜಮ್ಮಾ ಹೊಂದಿರುವವರು ಮತ್ತು ಸ್ಥಳೀಯ ಸಮುದಾಯಗಳ ಜನರೊಂದಿಗೆ ಮಾತ್ರ ವ್ಯವಹರಿಸಬೇಕೆಂದು ಅವರು ಮನವಿ ಮಾಡಿದರು.

ಕನ್ನಿಕಾವೇರಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಚ್ಚಿಮಂಡ ಅಪ್ಪಯ್ಯ ಮಾತನಾಡಿ, ಹೊರಗಿನವರಿಗೆ ಕೊಡಗಿನ ಭೂಮಿಯನ್ನು ಮಾರಾಟ ಮಾಡುವುದರಿಂದ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ಹಾಳಾಗುತ್ತದೆ. ಅಲ್ಲದೆ ಜಲಾನಯನ ಪ್ರದೇಶಗಳಲ್ಲಿ ಬೃಹತ್ ಕಟ್ಟಡಗಳು ತಲೆಎತ್ತುವುದರಿಂದ ಮಳೆ ಕೊರತೆಯೂ ಉಂಟಾಗುತ್ತದೆ, ಪರಿಸರವೂ ಹಾಳಾಗುತ್ತದೆ ಎಂದು ನುಡಿದರು.

ಗೋಷ್ಠಿಯಲ್ಲಿ ಕನ್ನಿಕಾವೇರಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಕೆ. ಪೂವಯ್ಯ, ಮಲ್ಚೀರ ಶಾನ್ ಬೋಪಯ್ಯ, ರಾಯ್ ಬೋಪಣ್ಣ ಉಪಸ್ಥಿತರಿದ್ದರು.