ವೀರಾಜಪೇಟೆ, ಜೂ. ೩೦: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿ ಮೇಲೆ ಟಿಪ್ಪರ್ ಲಾರಿಯೊಂದು ಹರಿದು ಮೃತಪಟ್ಟಿರುವ ಘಟನೆ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ಕೆ.ಬೋಯಿಕೇರಿ ಗ್ರಾಮದ ನಿವಾಸಿ ವಿಜೇಂದ್ರ (೫೨) ಎಂಬವರು ಸಂಜೆ ಚಿಕ್ಕಪೇಟೆ ಕಡೆಯಿಂದ ಕೆ.ಬೋಯಿಕೇರಿ ಮುಖ್ಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭ ಎದುರಿನಿಂದ ಆಗಮಿಸಿದ ಟಿಪ್ಪರ್ ಲಾರಿಗೆ ಬೀಳುವವರಿದ್ದಾಗ ಲಾರಿ ಚಾಲಕ ಇದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನಿಸಿದರೂ ವಿಜೇಂದ್ರ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಲಾರಿಯ ಹಿಂಬದಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವೀರಾಜಪೇಟೆ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ವಿಜೇಂದ್ರ ತಂಗಿ ಪ್ರೇಮ ಅವರು ನೀಡಿದ ದೂರನ್ನು ಆಧರಿಸಿ ಠಾಣಾಧಿಕಾರಿ ಪ್ರಮೋದ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ಲಾರಿ ವಶಪಡಿಸಿಕೊಂಡು ಚಾಲಕ ಎ.ಪಿ.ರಮೇಶ್‌ನನ್ನು ಬಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.