ಮಡಿಕೇರಿ, ಜೂ.೩೦: ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಗೆ ಸೇರಿಸದೆ; ಅರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾದ ಮನೆ ಮನೆ ಭೇಟಿ ಕಾರ್ಯಕ್ಕೆ ಇಂದು ಜಿಲ್ಲೆಯಾದ್ಯಂತ ಚಾಲನೆ ದೊರೆಯಿತು.

ಮನೆ ಮನೆ ಭೇಟಿ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಓಗಳು) ಮನೆ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ನೀಡಿ ಮನೆಯವರಿಂದ ಅಗತ್ಯವಾದ ಮಾಹಿತಿಗಳನ್ನು ಪಡೆದುಕೊಂಡರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಡಿಕೇರಿ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾದ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಸಹಾಯಕ ಮತದಾರರ ನೋಂದಣಾಧಿಕಾರಿಯಾದ ತಹಶೀಲ್ದಾರ್ ಶ್ರೀಧರ್ ಇವರುಗಳು ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರ ಮನೆಗೆ ಭೇಟಿ ನೀಡಿ ಗಣತಿ ನಮೂನೆಯನ್ನು ವಿತರಿಸಿದರು.

ಸಾರ್ವಜನಿಕರ ಮನೆ ಮನೆಗಳಿಗೂ ತೆರಳಿ ಗಣತಿ ನಮೂನೆಯನ್ನು ವಿತರಣೆ ಮಾಡಲಾಯಿತು. ಜುಲೈ ೨೯ರವರೆಗೆ ಮನೆ ಮನೆ ಭೇಟಿ ಪ್ರಕ್ರಿಯೆ ಜಿಲ್ಲೆಯಾದ್ಯಂತ ನಡೆಯಲಿದೆ.