ಮಡಿಕೇರಿ, ಜೂ. ೨೪: ದಲಿತ ಸಂಘರ್ಷ ಸಮಿತಿ ವತಿಯಿಂದ ಬುದ್ಧ, ಬಸವ ಹಾಗೂ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ರಾಜ್ ದರ್ಶನ್ ಸಭಾಂಗಣದಲ್ಲಿ ನಗರದ ಪೌರಕಾರ್ಮಿಕರಿಗೆ ಸ್ವೆಟರ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ನಗರವನ್ನು ಸ್ವಚ್ಛವಾಗಿರಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ದಸಂಸ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ಹಾಗೂ ಸಮಾಜಸೇವಕ ಡಾ. ಎಚ್.ವಿ. ದೇವದಾಸ್ ಅವರ ಮಾರ್ಗದರ್ಶನದಲ್ಲಿ ಕಳೆದ ಆರು ವರ್ಷಗಳಿಂದ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ಪ್ರಸನ್ನ ಎಡಿಕೇರಿ ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜಸೇವಕ ಹಾಗೂ ದಾನಿ ಡಾ. ಎಚ್.ವಿ. ದೇವದಾಸ್ ಅವರು ನಗರದ ೬೨ ಪೌರ ಕಾರ್ಮಿಕರು ಹಾಗೂ ಶ್ರೀಶಕ್ತಿ ವೃದ್ಧಾಶ್ರಮದ ನಿವಾಸಿಗಳಿಗೆ ಸ್ವೆಟರ್ ವಿತರಿಸಿದರು. ಬಳಿಕ ಮಾತನಾಡಿ, ಮುಂಜಾನೆ ಐದು ಗಂಟೆಯಿAದಲೇ ಕಾರ್ಯನಿರ್ವಹಿಸಿ ನಗರವನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಪಾಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯವಾಗಿದೆ ಎಂದರು.
ಮುಖ್ಯ ಭಾಷಣಕಾರರಾದ ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಲಕೃಷ್ಣ ರೈ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ ಸಾಧನೆ ಮತ್ತು ದೇಶಕ್ಕೆ ನೀಡಿದ ಸಂವಿಧಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಎಲ್. ದಿವಾಕರ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳ ಆಧಾರದಲ್ಲಿ ಸಂಘಟನೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಕಳೆದ ೧೨ ವರ್ಷಗಳಿಂದ ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಗುತ್ತಿದೆ.
ಶಿಕ್ಷಣಕ್ಕೆ ಉತ್ತೇಜನ ನೀಡಿ ಶಾಲೆಗಳಲ್ಲಿ ಶೇ.೧೦೦ ಫಲಿತಾಂಶ ಸಾಧಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರದೀಪ್ ಕರ್ಕೇರ, ಖಲೀಲ್, ಪ್ರೇಮ ಕೃಷ್ಣಪ್ಪ, ವೇಣುಕಿಶೋರ್, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.