ಕುಶಾಲನಗರ, ಜೂ. ೨೪: ವಚನ ಸಾಹಿತ್ಯ ವಿಶ್ವ ಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಮುನೀರ್ ಅಹ್ಮದ್ ಹೇಳಿದರು. ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಯಕಕ್ಕೆ ಮಹತ್ವ ಕೊಟ್ಟು ಶರಣರು ಸಮಾಜಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ ವಚನಗಳು. ದೇಸಿ ನುಡಿಗಳಲ್ಲಿ ರಚನೆಯಾದ ವಚನಗಳು ಕನ್ನಡ ಸಾಹಿತ್ಯ ಸಮಾಜಕ್ಕೆ ಸುಲಭವಾಗಿ ದಕ್ಕುವಂತೆ ಮಾಡಿದವು. ವಚನಕಾರರು ಲೌಕಿಕ ಜೀವನದ ವಾಸ್ತವತೆಯ ಪರಿಚಯ ಮಾಡಿದರು. ಶರಣರ ವಿಚಾರಧಾರೆಗಳನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಅಂದಿನ ಸಮಾಜ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಗೆ ವಚನಗಳ ಸಾರಾಂಶ ತಿಳಿಸಿಕೊಟ್ಟರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಚನಗಳ ಅಧ್ಯಯನಕ್ಕೆ ಅವಕಾಶ ಕೊಡಬೇಕು. ಯುವ ಪೀಳಿಗೆ ವಚನಗಳ ಸಾರವನ್ನು ಅರಿತುಕೊಂಡು ಅನುಸರಿಸುವಂತಾಗಬೇಕು. ಶಾಲೆಗಳು ವಚನಗಳ ಪ್ರಯೋಗ ಶಾಲೆ ಆಗಬೇಕು. ವಚನ ಗಾನ, ವಚನ ಪಠಣ ನಡೆಯಬೇಕು. ಶರಣ ಚಿಂತನೆ ಹರಡಬೇಕು. ಶರಣ ತತ್ವಗಳ ಸಂಶೋಧನೆ ಆಗಬೇಕು. ಈ ಬಗ್ಗೆ ವಿಚಾರ ಮಂಥನ ನಡೆಯಬೇಕು. ಕೊಡಗಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಚನ ಸಾಹಿತ್ಯ ಜತೆ ಮಿಳಿತ ಮಾಡುವಂತೆ ಆಗಬೇಕು. ಮನೆ, ಮನಕ್ಕೆ ಶರಣರ ಚಿಂತನೆ ಪಸರಿಸಬೇಕು. ದಾಸೋಹ ಎಲ್ಲಾ ಶರಣರ ನಿರಂತರ ಜವಾಬ್ದಾರಿ ಆಗಬೇಕು ಎಂದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶರಣ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಶರಣರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಶರಣ ತತ್ವಗಳನ್ನು ಹರಡುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿದರು. ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಸರೋಜ ಆರಾಧ್ಯ, ತಾಲೂಕು ಅಧ್ಯಕ್ಷೆ ಬಿ.ಬಿ. ಹೇಮಲತಾ, ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಉಪನ್ಯಾಸಕ ಡಾ. ಶೀನಪ್ಪ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್, ಅಖಿಲ ಭಾರತ ವೀರಶೈವ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಲಾಯಿತು.