ಮಡಿಕೇರಿ, ಜೂ. ೨೨: ಮುಂಗಾರು ಮಳೆ ಆರಂಭವಾಗಲು ವಿಳಂಬವಾಗುತ್ತ್ತಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆ ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಅರ್ಚಕರು ಹಾಗೂ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ಭಟ್ ಅವರ ನೇತೃತ್ವದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕರುಗಳಾದ ಶ್ರೀವತ್ಸ, ರೋಹನ್ ಮೊದಲಾದವರು ಸಹಕರಿಸಿದರು. ಮಳೆಗಾಗಿ ಓಂಕಾರೇಶ್ವರ ಸನ್ನಿಧಿಯಲ್ಲಿ ಸಮಿತಿಯಿಂದ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿ ಶಿವನಾಮ ಸ್ಮರಣೆ ಮಾಡಲಾಯಿತು. ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜು, ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಪ್ರಕಾಶ್ ಆಚಾರ್ಯ ಹಾಗೂ ಜಿ. ರಾಜೇಂದ್ರ, ದೇವಾಲಯ ಸಿಬ್ಬಂದಿ ಮತ್ತು ಭಕ್ತಾದಿಗಳು ಈ ಸಂದರ್ಭ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.