ವರದಿ : ಅಶ್ರಫ್

ಚೆಯ್ಯಂಡಾಣೆ, ಜೂ. ೨೨: ಕೊಡಗು ಜಿಲ್ಲೆಯಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಅದರಲ್ಲಿ ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚೇಲಾವರ ಜಲಪಾತ ಹಾಗೂ ಪ್ರಕೃತಿಯ ರಮಣೀಯ ಕಬ್ಬೆಬೆಟ್ಟ ಕೂಡ ಒಂದಾಗಿದೆ.

ಕಳೆದ ಕೆಲವು ದಿನಗಳಿಂದ ಚೇಲಾವರ ಕಬ್ಬೆಬೆಟ್ಟಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಪರ್ಯಾಸ ಏನೆಂದರೆ ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಪ್ರಕೃತಿ ರಮಣೀಯ ಈ ಸ್ಥಳದಲ್ಲಿ ಎಸೆಯುತ್ತಿರುವುದರಿಂದ ಪರಿಸರಕ್ಕೆ ಮಲಿನ ಉಂಟಾಗುತ್ತಿದ್ದೆ. ಚಿಪ್ಸ್, ಜ್ಯೂಸ್ ಬಾಟಲಿ, ನೀರಿನ ಬಾಟಲಿಗಳನ್ನು ಹಾಗೂ ಮದ್ಯದ ಬಾಟಲಿಗಳನ್ನು ತಂದು ನಿಸರ್ಗದ ಸೌಂದರ್ಯದ ಮಧ್ಯೆ ಬಿಟ್ಟು ಹೋಗುತ್ತಿದ್ದಾರೆ. ಈ ಪ್ರಕೃತಿಯು ಇದೀಗ ಕಸದ ರಾಶಿಯಾಗಿ ಮಾರ್ಪಡಾಗುತ್ತಿದೆ.

ಸ್ಥಳೀಯ ಆಡಳಿತ ಹಾಗೂ ಪ್ರವಾಸೋದ್ಯಮದ ಇಲಾಖೆ, ಪೊಲೀಸ್ ಇಲಾಖೆಯ ನಿರ್ಲಕ್ಷö್ಯದಿಂದಾಗಿ ಇಲ್ಲಿ ಸ್ವಚ್ಚತೆಯೇ ಮಾಯವಾಗಿದೆ. ಮುಂಜಾನೆ ಸಮಯ ೩-೪ ಗಂಟೆಗೆ ವಾಹನಗಳಲ್ಲಿ ಬಂದು ಡಿಜೆ ಹಾಕಿ ರಸ್ತೆಯ ಬದಿಯಲ್ಲಿಯೇ ಕುಣಿಯುವ ಕೆಲ ಪ್ರವಾಸಿಗರು, ರಾತ್ರಿ ೧೨ ಆದರೂ ಇಲ್ಲಿಂದ ಹಿಂತೆರಳುತ್ತಿಲ್ಲ. ಇನ್ನು ಕೆಲವರು ಸ್ಥಳೀಯ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುವ ಸಂದರ್ಭ ಕುಣಿಯುತ್ತಿರುವುದು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ.

ಕೆಲ ಸಂದರ್ಭ ಸ್ಥಳೀಯ ನಿವಾಸಿಗಳ ಮನೆಯ ಸಮೀಪದಲ್ಲಿ ಕಸವನ್ನು ತಂದು ಸುರಿಯುತ್ತಾರೆ, ಕೆಲವರು ರಸ್ತೆಯ ಮಧ್ಯ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ತೆರಳುತ್ತಾರೆ. ಈ ಕಾರಣದಿಂದಾಗಿ ಸ್ಥಳೀಯರಿಗೆ ಸುಲಭವಾಗಿ ರಸ್ತೆಯಲ್ಲಿ ಸಂಚರಿಸಲು ಅಸಧ್ಯವಾಗಿದ್ದು, ಪ್ರತಿನಿತ್ಯ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಸಂಭವಿಸುತ್ತಿದೆ.

ಮದ್ಯ ಹಾಗೂ ಗಾಂಜಾ ಸೇವನೆ ಮಾಡಲು ಇಲ್ಲಿಗೆ ಪ್ರವಾಸಿಗರ ಹೆಸರಿನಲ್ಲಿ ಬರುವವರೆ ಹೆಚ್ಚು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇದರ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿಗೆ, ಪೊಲೀಸ್ ಇಲಾಖೆಗೆ, ಅರಣ್ಯ ಇಲಾಖೆಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಗ್ರಾಂಸ್ಥರಲ್ಲಿ ಅಸಮಾಧಾನ ಮೂಡಿದೆ. ರಾತ್ರಿ ವೇಳೆ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟದಲ್ಲಿ ಅಪ್ರಾಪ್ತರು ಹೆಚ್ಚಾಗಿ ಸುಳಿದಾಡುತ್ತಿರುತ್ತಾರೆ, ರಾತ್ರಿ ವೇಳೆ ಇಲ್ಲಿಗೆ ನಿರ್ಬಂಧ ವಿಧಿಸಬೇಕು. ಅನಾಹುತ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ರಾತ್ರಿ ವೇಳೆ ಸುಳಿದಾಡುವವರಿಗೆ ಪೊಲೀಸ್ ಇಲಾಖೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಣಗಳಲ್ಲಿ ಸ್ವಚ್ಛತೆ..

ಚೇಲಾವರ ಗ್ರಾಮದ ಸಂಜೀವಿನಿ ಒಕ್ಕೂಟ, ಸ್ಥಳೀಯ ಸ್ವಸಹಾಯ ಸಂಘ, ಯುವಕರ ಸಂಘಗಳು, ರೆಸಾರ್ಟ್ಗಳು ಹಲವಾರು ಬಾರಿ ಈ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಡಿದರೂ ಪುನಃ ಕಸದ ರಾಶಿ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟದಲ್ಲಿ ಹೆಚ್ಚಾಗುತ್ತಲೇ ಇದೆ.

ಪ್ರವಾಸಿ ತಾಣದಲ್ಲಿ ಸ್ವಚ್ಛತೆ ಕಾಪಾಡಲು ಅಲ್ಲಲ್ಲಿ ಸ್ವಚ್ಛತೆಯ ನಾಮಫಲಕ ಅಳವಡಿಸಬೇಕು, ಪ್ರವಾಸಿಗರು ಕಸವನ್ನು ಕಂಡ ಕಂಡಲ್ಲಿ ಹಾಕಿದರೆ ದಂಡ ವಿಧಿಸಬೇಕು, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಈ ರೀತಿ ಪ್ರವಾಸಿಗರಿಗೆ ಅರಿವು ಬಂದಲ್ಲಿ ಎಲ್ಲಾ ಪ್ರವಾಸಿ ತಾಣಗಳು ಸ್ವಚ್ಛತೆಯಿಂದ ಸುಂದರವಾಗಿರುವುದಾಗಿ ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಗ್ರಾಮಸ್ಥರಿಂದಲೇ ಗೇಟ್ ಅಳವಡಿಕೆ

ಕೆಲವು ಪ್ರವಾಸಿಗರು ತಮ್ಮ ಬೈಕ್ ಹಾಗೂ ವಾಹನಗಳನ್ನು ಬೆಟ್ಟದ ತುದಿಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಸಾಹಸ ರೈಡ್ ಮಾಡುವುದು ಕೂಡ ನಡೆಯುತ್ತಿತ್ತು. ಇದನ್ನು ತಡೆಯಲು ಗ್ರಾಮಸ್ಥರೇ ಒಂದು ವಾರದ ಹಿಂದೆ ತಾತ್ಕಾಲಿಕ ಗೇಟ್ ನಿರ್ಮಿಸಿದ್ದಾರೆ.