ಸೋಮವಾರಪೇಟೆ, ಜೂ. ೨೨: ನಿವೇಶನಕ್ಕೆ ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆ ೫೨ನೇ ದಿನ ಪೂರೈಸಿದ್ದು, ಶಾಸಕ ಡಾ. ಮಂತರ್ ಗೌಡ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು.
ಈವರೆಗೆ ತಮ್ಮ ಬೇಡಿಕೆಗಳಿಗೆ ಪೂರಕ ಸ್ಪಂದನ ದೊರಕದ ಹಿನ್ನೆಲೆ ತಾ. ೨೫ರಂದು ಶಾಸಕ ಡಾ. ಮಂತರ್ ಗೌಡ ಅವರ ಮನೆ ಎದುರು ಉಪವಾಸ ಸತ್ಯಾಗ್ರಹ ನಡೆಸಲು ಪ್ರತಿಭಟನಾಕಾರರು ನಿರ್ಧಾರ ಕೈಗೊಂಡಿದ್ದರು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ, ಇಂದು ಶಾಸಕರೊಂದಿಗೆ ಧರಣಿ ಸ್ಥಳಕ್ಕೆ ತೆರಳಿತು.
ಶಾಸಕ ಡಾ. ಮಂತರ್ ಗೌಡ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಅಹವಾಲು ಆಲಿಸಿದರು. ಈ ಸಂದರ್ಭ ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಅವರು, ಮಾದಾಪುರ ಗ್ರಾಮ ಪಂಚಾಯಿತಿ ಕುಂಬೂರು ಗ್ರಾಮದ ಸರ್ವೆ ನಂ. ೧೨೫/೧, ಗರಗಂದೂರು ಗ್ರಾಮದ ೨೨/೧-೨ ಹಾಗೂ ೪೦/೧ರಲ್ಲಿ ನಿವೇಶನ ನೀಡಬೇಕೆಂದು ಮನವಿ ಮಾಡಿದರು.
ಧರಣಿ ನಡೆಸುತ್ತಿರುವ ಸ್ಥಳ ಖಾಸಗಿ ಜಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸ.ನಂ. ೧೨೫/೧ರಲ್ಲಿ೩೧.೨೦ ಏಕರೆ ಜಾಗ ಊರುಡುವೆ ಪೈಸಾರಿ ಇದ್ದು, ಇದರಲ್ಲಿ ೨ ಏಕರೆ ಜಾಗವನ್ನು ನವಗ್ರಾಮಕ್ಕೆ ಮೀಸಲಿಟ್ಟು ಕಳೆದ ೨೦೧೧ರಲ್ಲಿ ಆದೇಶ ಹೊರಡಿಸಲಾಗಿದೆ. ಉಳಿದ ೨೯.೧೦ ಏಕರೆ ಜಾಗ ಸೇರಿದಂತೆ ನವಗ್ರಾಮಕ್ಕೆ ಮೀಸಲಿಟ್ಟ ಜಾಗವೂ ಇದೀಗ ಒತ್ತುವರಿಯಾಗಿದೆ ಎಂದು ಆರೋಪಿಸಿದರು. ಗರಗಂದೂರಿನ ಸ.ನಂ.೨೨/೧-೨ರಲ್ಲಿ ೧೨ ಏಕರೆ ಜಾಗವಿದ್ದು, ಇದೂ ಸಹ ಊರುಡುವೆ ಪೈಸಾರಿಯಾಗಿದೆ. ಇಲ್ಲೂ ಸಹ ೨ ಏಕರೆ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರಿಗೆ ಮಂಜೂರು ಮಾಡಲಾಗಿದೆ. ಉಳಿದ ೧೦ ಏಕರೆ ಜಾಗ ಒತ್ತುವರಿಯಾಗಿದೆ. ಸ.ನಂ. ೪೦/೧ರಲ್ಲಿ ೧೦೦ ಏಕರೆ ಜಾಗವದ್ದು, ಸಂಪೂರ್ಣ ಜಾಗ ಒತ್ತುವರಿಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸಿ ನಮಗೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಮೂರೂ ಸರ್ವೆ ನಂಬರ್ಗಳಲ್ಲಿರುವ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಬೇಕು. ತಾ. ೨೭ರ ಒಳಗೆ ವರದಿ ನೀಡಬೇಕೆಂದು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಧರಣಿ ನಿರತರು ಯಾವೆಲ್ಲಾ ಗ್ರಾಮ ಪಂಚಾಯಿತಿಯಿAದ ಆಗಮಿಸಿದ್ದಾರೆ ಎಂಬ ಬಗ್ಗೆ ತಾಲೂಕು ಪಂಚಾಯಿತಿಗೆ ಮಾಹಿತಿ ನೀಡುವಂತೆ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಾಲ್ಕೆöÊದು ಗ್ರಾಮ ಪಂಚಾಯಿತಿಯ ನಿವೇಶನ ರಹಿತರು ಇಲ್ಲಿದ್ದಾರೆ. ನಾವುಗಳು ನಿಮ್ಮ ಕಚೇರಿಗೆ ಬರುವುದಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಇಲ್ಲಿಗೆ ಕಳುಹಿಸಿ ಮಾಹಿತಿ ಪಡೆದುಕೊಳ್ಳಿ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಇದರೊಂದಿಗೆ ಗ್ರಾಮ ಪಂಚಾಯಿತಿಯಲ್ಲಿರುವ ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ, ಒಂದು ವೇಳೆ ಹೆಸರು ಬಿಟ್ಟುಹೋಗಿದ್ದರೆ ಸೇರಿಸಿ ಎಂದು ಒತ್ತಾಯಿಸಿದರು. ಮುಂದಿನ ತಾ. ೩೦ರೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಪ್ರತಿಭಟನಾಕಾರರು ತಿಳಿಸಿದ ಜಾಗವನ್ನು ತಕ್ಷಣ ಸರ್ವೆ ಮಾಡಬೇಕು. ಜಾಗದ ಲಭ್ಯತೆಯನ್ನು ಪರಿಗಣಿಸಿ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ನಿವೇಶನ ಲಭಿಸುವವರೆಗೂ ಧರಣಿಯನ್ನು ಮುಂದುವರೆಸುವುದಾಗಿ ಪ್ರತಿಭಟನಾಕಾರರು ಹೇಳಿದರು. ಈ ಸಂದರ್ಭ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಶಿವಪ್ಪ, ಹೋಬಳಿ ಅಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಸುದೀಪ್ ಸೇರಿದಂತೆ ಇತರರು ಇದ್ದರು. ಈ ಮಧ್ಯೆ ೫೩ನೇ ದಿನಕ್ಕೆ ನಿವೇಶನ ರಹಿತರ ಧರಣಿ ಕಾಲಿಟ್ಟಿದೆ.