ಕೂಡಿಗೆ/ಕುಶಾಲನಗರ, ಜೂ. ೨೨: ಜಿಲ್ಲೆಯ ಎಲ್ಲೆಡೆಯಂತೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕೂಡ ಈ ಸಾಲಿನಲ್ಲಿ ಮಳೆ ಪ್ರಮಾಣ ಕುಂಠಿತವಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ ತುಂಬಲು ಇನ್ನೂ ೩೪ ಅಡಿಗಳಷ್ಟು ಬಾಕಿ ಇದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿ ತುಂಬಿ ಹರಿದು ಅಪಾಯದ ಮಟ್ಟ ಮೀರಿ ನದಿ ತಟದ ಜನತೆಯಲ್ಲಿ ಪ್ರವಾಹದ ಆತಂಕ ಮೂಡಿಸಿತ್ತು. ಹಾರಂಗಿ ಜಲಾಶಯ ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ೨೪ ಅಡಿಗಳಷ್ಟು ನೀರಿನ ಮಟ್ಟ ಇಳಿಕೆ ಕಾಣಬಹುದು.
ಕಳೆದ ವರ್ಷ ಇದೇ ಅವಧಿಯಲ್ಲಿ ೨,೨೮೭ ಕ್ಯೂಸೆಕ್ಸ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಪ್ರಮಾಣದ ನೀರು ಜಲಾಶಯಕ್ಕೆ ಒಳಹರಿವು ದಾಖಲಾಗಿತ್ತು. ನದಿಗೆ ೧,೦೦೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು.
ಈ ಬಾರಿ ಪ್ರಸ್ತುತ ೨೭೩ ಕ್ಯೂಸೆಕ್ಸ್ ಪ್ರಮಾಣದ ನೀರು ಮಾತ್ರ ಅಣೆಕಟ್ಟೆಗೆ ಹರಿದು ಬರುತ್ತಿದೆ, ನದಿಗೆ ೧೮೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
ಸಮುದ್ರ ಮಟ್ಟದಿಂದ ೨,೮೫೯ ಅಡಿಗಳಷ್ಟು ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟೆಯಲ್ಲಿ ಈ ಬಾರಿ ೨,೮೨೫.೩ ಅಡಿಗಳಷ್ಟು ಮಾತ್ರ ನೀರಿನ ಮಟ್ಟ ಗೋಚರಿಸಿದೆ. ಅಣೆಕಟ್ಟೆ ತುಂಬಲು ಇನ್ನೂ ೩೪ ಅಡಿ ಬಾಕಿ ಇದೆ.
ಕುಶಾಲನಗರ ಪ್ರವಾಸಿ ಮಂದಿರದ ಮಳೆ ಮಾಪನದ ದಾಖಲೆಯಂತೆ ಪಟ್ಟಣದಲ್ಲಿ ಕಳೆದ ಮಳೆಗಾಲ ಅವಧಿಯಲ್ಲಿ ೫೬೬.೬ ಮಿಮಿ ಪ್ರಮಾಣದ ಮಳೆ ಸುರಿದರೆ ಈ ಬಾರಿ ಕೇವಲ ೨೦೪.೨ ಮಿಮಿ ಪ್ರಮಾಣದ ಮಳೆ ಸುರಿದಿರುವುದು ಗಮನಿಸಬಹುದು. ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ಕಳೆದ ವರ್ಷ ಕಾವೇರಿ ಸೇತುವೆಯ ಕೆಳಭಾಗದಲ್ಲಿ ೭ ಮೀಟರ್ ಎತ್ತರಕ್ಕೆ ನೀರಿನ ಹರಿವು ಕಂಡುಬAದಿತ್ತು. ಅದೇ ಈ ಬಾರಿ ಇನ್ನೂ ಕನಿಷ್ಟ ಒಂದು ಅಡಿಯಷ್ಟು ನೀರು ಏರಿಕೆ ಆಗದಿರುವ ದೃಶ್ಯ ಭವಿಷ್ಯದ ಆತಂಕಕ್ಕೆ ಎಡೆ ಮಾಡಿದೆ.