ಮಡಿಕೇರಿ, ಜೂ. ೨೧: ಕೊಡಗಿನ ಇತಿಹಾಸ, ಸಂಸ್ಕೃತಿ ಮತ್ತು ಕೃಷಿ ಪರಂಪರೆಯೊAದಿಗೆ ಅವಿನಾಭಾವ ಸಂಬAಧ ಹೊಂದಿರುವ ಮೂಲ ನಿವಾಸಿ ಜನಾಂಗಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಸಮುದಾಯವೆಂದರೆ ಕೆಂಬಟ್ಟಿ ಜನಾಂಗ.

ರಾಜರ ಆಳ್ವಿಕೆಯ ಕಾಲದಿಂದಲೇ ಕೃಷಿಯನ್ನು ಜೀವನಾಧಾರವನ್ನಾಗಿ ಮಾಡಿಕೊಂಡು ಪ್ರಕೃತಿಯೊಂದಿಗೆ ಬೆರೆತು ಬದುಕು ಸಾಗಿಸಿರುವ ಈ ಸಮುದಾಯ, ಕೊಡಗಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಅವಿಭಾಜ್ಯ ಅಂಗವಾಗಿದೆ. ಪ್ರಸ್ತುತ ಕೊಡಗಿನ ಸುಮಾರು ೩೧ಕ್ಕೂ ಅಧಿಕ ಗ್ರಾಮಗಳಲ್ಲಿ ನೆಲೆಸಿರುವ ಕೆಂಬಟ್ಟಿ ಜನಾಂಗದ ಜನಸಂಖ್ಯೆ ಎಂಟು ಸಾವಿರಕ್ಕೂ ಅಧಿಕವಾಗಿದೆ. (ಇನ್ನೂ ಸಮೀಕ್ಷೆ ನಡೆದಿಲ್ಲ) ಅನಾದಿಕಾಲದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿರುವ ಈ ಸಮುದಾಯ ಹಲವು ಸಂಕಷ್ಟಗಳು ಮತ್ತು ಸಾಮಾಜಿಕ ಶೋಷಣೆಗಳ ನಡುವೆಯೂ ತನ್ನದೇ ಆದ ಆಚಾರ-ವಿಚಾರ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ಈ ಸಮುದಾಯದಲ್ಲಿ ಕಳೆದ ಕೆಲವು ದಶಕಗಳಲ್ಲಿ ಶಿಕ್ಷಣದ ಅರಿವು ಹೆಚ್ಚಾಗಿದ್ದು, ಸುಮಾರು ಶೇ. ೪೫ ರಷ್ಟು ಜನರು ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಇದರ ಫಲವಾಗಿ ಜನಾಂಗದ ಹಲವರು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ದೇಶ ಸೇವೆಯಲ್ಲಿ ವೀರ ಯೋಧರಾಗಿ, ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಾಗಿ, ಶಿಕ್ಷಕರು, ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಶÀÄಶ್ರೂಷಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ನಡುವೆಯೂ ಈ ಸಮುದಾಯ ಇನ್ನೂ ಅನೇಕ ರೀತಿಯ ಅನ್ಯಾಯ ಮತ್ತು ತಾರತಮ್ಯವನ್ನು ಎದುರಿಸುತ್ತಿದೆ. ಇಂದಿಗೂ ಕೆಲವು ಕಡೆಗಳಲ್ಲಿ ಜಾತಿ ಆಧಾರಿತ ಅಸ್ಪೃಶ್ಯತೆಯ ಮನೋಭಾವ ಮುಂದುವರಿದಿರುವುದು ವಿಷಾದನೀಯ ಸಂಗತಿಯಾಗಿದೆ. ಆಧುನಿಕ ಯುಗದಲ್ಲಿಯೂ ಸಹ ಕೆಲವರು ಇವರನ್ನು ಸಾಮಾಜಿಕವಾಗಿ ಕಡೆಗಣಿಸುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಬೆಳವಣಿಗೆಯಾಗಿದೆ. ಕೆಂಬಟ್ಟಿ ಜನಾಂಗದವರು ತಮ್ಮದೇ ಆದ ಕೊಡವ ಸಂಪ್ರದಾಯ ಮತ್ತು ಪರಂಪರೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಕಾವೇರಿ ಸಂಕ್ರಮಣ, ಕೈಲ್ ಮುಹೂರ್ತ, ಹುತ್ತರಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಾರೆ. ಜೊತೆಗೆ ತಮ್ಮ ಕುಲದೇವತೆಯಾದ ಶ್ರೀ ಪನ್ನಂಗಾಲತಮ್ಮೆ ದೇವಿಯ ಆರಾಧನೆಯನ್ನು ಅತ್ಯಂತ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕಕ್ಕಬೆ ಪ್ರದೇಶದಲ್ಲಿರುವ ಆದಿ ಪನ್ನಂಗಾಲತಮ್ಮೆ ದೇವಿಯ ಮೂಲಸ್ಥಾನವು ಈ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿ ಪರಿಗಣಿಸಲಾಗಿದೆ. ಇಷ್ಟೆಲ್ಲಾ ಸಾಂಸ್ಕೃತಿಕ ವೈಶಿಷ್ಟö್ಯತೆಗಳಿದ್ದರೂ, ಕೆಲವು ಗ್ರಾಮಗಳಲ್ಲಿ ಇಂದಿಗೂ ಸಮುದಾಯದ ಹಲವಾರು ಕುಟುಂಬಗಳಿಗೆ ಸ್ವಂತ ಮನೆ ಅಥವಾ ಹಕ್ಕುಪತ್ರಗಳ ಕೊರತೆ ಕಂಡುಬರುತ್ತಿದೆ. ಸ್ವಾತಂತ್ರ‍್ಯಪೂರ್ವ ಕಾಲದಿಂದಲೂ ಮೂಲ ನಿವಾಸಿಗಳಾಗಿ ಗುರುತಿಸಿಕೊಂಡಿರುವ ಈ ಸಮುದಾಯದ ಇತಿಹಾಸ, ಸ್ವಾತಂತ್ರ‍್ಯ ಹೋರಾಟಗಾರರ ಸಾಧನೆಗಳು ಹಾಗೂ ಹಿರಿಯರ ಅಮೂಲ್ಯ ದಾಖಲೆಗಳು ಕಾಲಕ್ರಮೇಣ ಪಟ್ಟಭದ್ರ ಹಿತಾಶಕ್ತಿಗಳ ದಾಳಿಗೆ ಮರೆಯಾಗಿರುವುದು ಮತ್ತೊಂದು ನೋವಿನ ಸಂಗತಿಯಾಗಿದೆ.

ಕೊಡಗಿನ ಇತಿಹಾಸದಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವ ಮೂಲ ನಿವಾಸಿ ಸಮುದಾಯವಾಗಿರುವ ಕೆಂಬಟ್ಟಿ ಜನಾಂಗದ ಕೊಡುಗೆ ಅಪಾರವಾಗಿದೆ. ಪ್ರಕೃತಿ, ಕೃಷಿ, ಸಂಸ್ಕೃತಿ ಮತ್ತು ಸಾಮಾಜಿಕ ಜೀವನದೊಂದಿಗೆ ಬೆಸೆದುಕೊಂಡಿರುವ ಈ ಜನಾಂಗ ಕೊಡಗಿನ ಭೂಪ್ರದೇಶದ ಸೌಂದರ್ಯ ಹಾಗೂ ಪರಂಪರೆಯ ಪ್ರತೀಕವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಇನ್ನಷ್ಟು ಅವಕಾಶಗಳು, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಸೌಲಭ್ಯಗಳು ದೊರೆತಲ್ಲಿ ಈ ಸಮುದಾಯ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಕೊಡಗಿನ ಮೂಲ ನಿವಾಸಿ ಕೆಂಬಟ್ಟಿ ಜನಾಂಗದ ಇತಿಹಾಸ, ಸಂಸ್ಕೃತಿ ಮತ್ತು ಕೊಡುಗೆಗಳನ್ನು ಸಂರಕ್ಷಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ.

- ಚಟ್ಟಕುಟ್ಟಡ ಶಶಿ ಅಚ್ಚಪ್ಪ, ಮಗ್ಗುಲ.