ಕೋವರ್‌ಕೊಲ್ಲಿ ಇಂದ್ರೇಶ್
ಧರ್ಮಸ್ಥಳ, ಜೂ. ೨೧: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳ ಗುರುತು ಪತ್ತೆ ಕಾರ್ಯವನ್ನು ವೇಗಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಅತ್ಯಾಧುನಿಕ ಐಸೊಟೋಪ್ ವಿಶ್ಲೇಷಣೆ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.
ರಾಜ್ಯ ಸರ್ಕಾರಕ್ಕೆ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿರುವ ಎಸ್‌ಐಟಿ, ಅಂತಿಮ ವರದಿಗಾಗಿ ಕಳೆದ ಮೂರು ದಿನಗಳಿಂದ ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಾಕ್ಷö್ಯ ಸಂಗ್ರಹ ಕಾರ್ಯ ನಡೆಸುತ್ತಿದೆ. ಕಳೆದ ವರ್ಷ ಚಿನ್ನಯ್ಯ ನೀಡಿದ ಮಾಹಿತಿಯ ಆಧಾರದ ಮೇಲೆ ಯಂತ್ರಗಳ ಸಹಾಯದಿಂದ ನಡೆಸಿದ ಶೋಧ ಕಾರ್ಯದಲ್ಲಿ ಏಳು ಮಾನವ ಅಸ್ಥಿಪಂಜರಗಳ ಅವಶೇಷಗಳು ಪತ್ತೆಯಾಗಿದ್ದವು.
ಪತ್ತೆಯಾದ ತಲೆಬುರುಡೆಗಳಲ್ಲಿ ಒಂದನ್ನು ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ೭೦ ವರ್ಷದ ಯು.ಬಿ. ಅಯ್ಯಪ್ಪ ಅವರದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಸ್ಥಿಪಂಜರದ ಅವಶೇಷಗಳ ಸಮೀಪ ಅವರ ಹೆಸರಿನ ಗುರುತಿನ ಚೀಟಿ ಪತ್ತೆಯಾಗಿದ್ದರೂ, ಅದರ ಆಧಾರದಲ್ಲಿ ಮಾತ್ರ ಮೃತರ ಗುರುತನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊಡಗಿನ ವ್ಯಕ್ತಿ ಎನ್ನಲಾಗುತ್ತಿರುವ ಅಯ್ಯಪ್ಪ ಅವರ ಕುಟುಂಬ ಸೇರಿದಂತೆ ಕಾಣೆಯಾದವರ ೭ ಕುಟುಂಬ ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಕ್ರಮವಹಿಸಲಾಗಿದ್ದು, ಅಸ್ಥಿಗಳ ಡಿಎನ್‌ಎ ಜೊತೆ ಹೋಲಿಕೆ ನಡೆಸುವ ಕಾರ್ಯ ಮುಂದುವರಿದಿದೆ. ರಾಜ್ಯದ ವಿವಿಧ ಭಾಗಗಳಿಂದ ನಾಪತ್ತೆಯಾಗಿರುವವರ ವಿವರಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಈಗಾಗಲೇ ಏಳು ಕುಟುಂಬಗಳ ಸದಸ್ಯರ ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದು, ಇನ್ನೂ ಹಲವರ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದೆ.
ವಿಧಿವಿಜ್ಞಾನ ಪರೀಕ್ಷೆಗಳ ಜೊತೆಗೆ ಕರ್ನಾಟಕ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ, ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ, ರಾಜ್ಯದ ವಿವಿಧ ಪೊಲೀಸ್ ಠಾಣೆಗಳು ಹಾಗೂ ನೆರೆಯ ಕೇರಳ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಿಂದ ಕಾಣೆಯಾದ ವ್ಯಕ್ತಿಗಳ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಂಬAಧಿಕರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿರುವ ಹಲವಾರು ಕುಟುಂಬಗಳು ಈಗಾಗಲೇ ಎಸ್‌ಐಟಿಯನ್ನು ಸಂಪರ್ಕಿಸಿವೆ.
ಐಸೊಟೋಪ್ ವಿಶ್ಲೇಷಣೆ ಎಂಬುದು ಫೋರೆನ್ಸಿಕ್ ಮಾನವಶಾಸ್ತç ಮತ್ತು ಪುರಾತತ್ವ ಕ್ಷೇತ್ರದಲ್ಲಿ ಬಳಸಲಾಗುವ ವೈಜ್ಞಾನಿಕ ತಂತ್ರಜ್ಞಾನವಾಗಿದೆ.