ಮಡಿಕೇರಿ, ಜೂ. ೨೧: ಬೆಂಗಳೂರು ಕೊಡವ ಸಮಾಜದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿರುವುದು ವಿಶೇಷವಾಗಿದೆ.
ಒಂದೇ ಜನಾಂಗಕ್ಕೆ ಸೇರಿದ ೫೦೦ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿ ಯೋಗಾಭ್ಯಾಸ ನಡೆಸಿದ್ದು ದಾಖಲೆ ಎನಿಸಿದೆ. ಬೆಂಗಳೂರು ಕೊಡವ ಸಮಾಜದ ವತಿಯಿಂದ ಇಂದು ಅಲ್ಲಿನ ಶಾಂತಿನಗರದಲ್ಲಿರುವ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗಾಚರಣೆ ನಡೆಸಲಾಯಿತು. ೫೦೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಇದು ಬೃಹತ್ ಜನಾಂಗೀಯವಾದ ಪಾಲ್ಗೊಳ್ಳುವಿಕೆ ಎಂಬ ಹಿರಿಮೆಗೆ ಪಾತ್ರವಾಯಿತು. ಕಾರ್ಯಕ್ರಮವನ್ನು ಯೋಗಗುರು ಭರತನಾಟ್ಯ ಪ್ರವೀಣೆ ಕೋಟೆರ ಯಾಮಿನಿ ಮುತ್ತಣ್ಣ ಅವರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಹಾಗೂ ಪದಾಧಿಕಾರಿಗಳೊಂದಿಗೆ ಸೇರಿ ಉದ್ಘಾಟಿಸಿದರು. ಯಾಮಿನಿ ಮುತ್ತಣ್ಣ ಅವರು ಪುರಾತನವಾಗಿ ಬಂದಿರುವ ಯೋಗ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಪೂರಕವಾಗಿದೆ ಎಂದರು.
ಸುರೇಶ್ ನಂಜಪ್ಪ ಅವರು, ಯೋಗದ ಮಹತ್ವದ ಬಗ್ಗೆ ವಿವರಿಸಿದರು. ಮಂಡೇಟಿರ ರಮ್ಯ ಸುನಿಲ್ ಮುಂದಾಳತ್ವದಲ್ಲಿ ವಿವಿಧ ವಯೋಮಾನದವರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಬೊಳ್ಳೆರ ಪೃಥ್ವಿ ಪೂಣಚ್ಚ ನಿರೂಪಿಸಿ, ಬೊಟ್ಟೋಳಂಡ ಆಶಿತಾ ಬೋಪಣ್ಣ ಪ್ರಾರ್ಥಿಸಿದರು. ಆಲ್ಕೆಮಿ ಕಾಫಿ ರೆಸಾರ್ಟ್ ಪ್ರಾಯೋಜಕತ್ವ ಸೇರಿ ಇತರ ಸಹಕಾರ ನೀಡಿತ್ತು. ಈ ಸಂದರ್ಭ ಕರ್ನಾಟಕ ಬುಕ್ ಆಫ್ ರೆಕಾರ್ಟ್ಸ್ ಅಧ್ಯಕ್ಷ ಸಮೀಮ್ ರಾಜಾ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದು, ನೂತನ ದಾಖಲೆ ಬಗ್ಗೆ ಪ್ರಕಟಿಸಿ ಪ್ರಮಾಣ ಪತ್ರ ವಿತರಿಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಯಾಮಿನಿ ಮುತ್ತಣ್ಣ, ಸಮಾಜದ ಅಧ್ಯಕ್ಷ ಸುರೇಶ್ ನಂಜಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಆಶಾ ವಿವೇಕ್, ಜಂಟಿ ಕಾರ್ಯದರ್ಶಿ ಚೊಟ್ಟೆಯಂಡ ಆರತಿ ಅಯ್ಯಮ್ಮ, ಖಜಾಂಚಿ ಚೇಮಿರ ಪೊನ್ನಪ್ಪ, ಜಂಟಿ ಖಜಾಂಚಿ ಮಲ್ಲೇಂಗಡ ಮುತ್ತಣ್ಣ, ಮಾಜಿ ಉಪಾಧ್ಯಕ್ಷೆ ಮೊಣ್ಣಂಡ ಸೀತಾ ಅಯ್ಯಣ್ಣ ಉಪಸ್ಥಿತರಿದ್ದರು.