ಗೋಣಿಕೊಪ್ಪಲು, ಜೂ. ೨೧: ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗಿನ ತಿತಿಮತಿ, ಮಾಯಮುಡಿ, ಕುರ್ಚಿ, ಬೀರುಗ, ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ಬೆಳೆಗಾರರ, ರೈತರ ತೋಟಗಳಲ್ಲಿ ಕಂಡು ಬರುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಕಾಡಾನೆಗಳ ಉಪಟಳವನ್ನು ನಿಯಂತ್ರಿಸಲು ಕೃಷಿಕರು, ರೈತರು ಬೆಳೆಗಾರರು ತಮ್ಮ ತೋಟದ ಸುತ್ತಲು ಸೋಲಾರ್ ಬೇಲಿಗಳನ್ನು ನಿರ್ಮಿಸಿ ಆ ಮೂಲಕ ಕಾಡಾನೆಗಳು ತೋಟಗಳಿಗೆ ಪ್ರವೇಶ ಮಾಡದಂತೆ ಎಚ್ಚರ ವಹಿಸುತ್ತಿದ್ದಾರೆ.
ಆದರೆ ಸೋಲಾರ್ ಬೇಲಿಗಳನ್ನು ಮುರಿದು ತೋಟವನ್ನು ಪ್ರವೇಶಿಸಿ ಅಲ್ಲಿ ಬೆಳೆದು ನಿಂತಿರುವ ಕಾಫಿ, ಅಡಿಕೆ, ತೆಂಗು ಸೇರಿದಂತೆ ಭತ್ತದ ಗದ್ದೆಗಳನ್ನು ಕೂಡ ಧ್ವಂಸ ಮಾಡಿ ಆಗಿಂದ್ದಾಗಿಯೇ ರೈತರಿಗೆ ಅಪಾರ ನಷ್ಟ ಈ ಕಾಡಾನೆಗಳ ಹಿಂಡಿನಿAದ ಸಂಭವಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ರೈತರನ್ನು, ಬೆಳೆಗಾರರನ್ನು ನಿದ್ದೆಗೆಡಿಸಿದೆ.
ಅರಣ್ಯ ಇಲಾಖೆಯು ಕಾಡಾನೆಯ ನಿಯಂತ್ರಣಕ್ಕೆ ಅಗತ್ಯವಿರುವ ಸಿಬ್ಬಂದಿಗಳ ನೇಮಕ ಸಂದರ್ಭ ಯಾವುದೇ ತರಬೇತಿ ಹೊಂದದೆ ಇರುವ ಯುವಕರ ಆಯ್ಕೆ, ಅರಣ್ಯದಂಚಿನಲ್ಲಿ ಸಿಬ್ಬಂದಿಗಳನ್ನು ನೇಮಿಸದೆ ಇರುವುದು. ತಂತ್ರಜ್ಞಾನ ಬಳಕೆಯನ್ನು ಬಳಸದಿರುವುದು ಕಾಡಾನೆಗಳು ಬರುವ ಮಾರ್ಗದಲ್ಲಿ ಆನೆ ಕಂದಕಗಳನ್ನು ದುರಸ್ತಿಪಡಿಸದೆ ಇರುವುದು ಕಾಡಾನೆಗಳು ನಾಡಿಗೆ ಬಂದ ನಂತರ ಇಲಾಖೆಯ ಸಿಬ್ಬಂದಿಗಳು ತಮ್ಮ ವ್ಯಾಪ್ತಿಯಿಂದ ಮತ್ತೊಂದು ವ್ಯಾಪ್ತಿಗೆ ಆನೆಗಳನ್ನು ಅಟ್ಟುವ ಮೂಲಕ ತಮ್ಮ ವ್ಯಾಪ್ತಿ ಮುಗಿದಿದೆ ಎಂದು ವಾಪಸ್ಸಾಗುವುದು, ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಕಾಡಾನೆಯ ನಿಯಂತ್ರಣಕ್ಕೆ ಮಾಹಿತಿ ನೀಡದಿರುವುದು, ರಾತ್ರಿಯ ವೇಳೆ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸದೆ ಇರುವುದು, ಎಐ ಕ್ಯಾಮೆರಾ ಸ್ಯಾಟ್‌ಲೈಟ್‌ಗಳ ಬಳಕೆ ಮಾಡದಿರುವುದು, ರೇಡಿಯೋ ಕಾಲರ್ ಅಳವಡಿಸಿರುವ ಆನೆಗಳನ್ನು ಮಾನಿಟರ್ ಮಾಡದಿರುವುದು, ಕಾಡಾನೆಗಳು ಅರಣ್ಯದಿಂದ ಬರುವ ಜಾಗದಲ್ಲಿ ಅತ್ಯಾಧುನಿಕ ರೀತಿಯ ಕ್ಯಾಮೆರಾ ಅಳವಡಿಕೆ ಮಾಡದಿರುವುದು, ಕಾಡಾನೆಯ ಕಾರ್ಯಾಚರಣೆಯ ವಿಫಲಕ್ಕೆ ಕಾರಣವಾಗುತ್ತಿದೆ.
ಫಸಲು ನಾಶಕ್ಕೆ ಒಂದಷ್ಟು ಪರಿಹಾರಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿರುವ ಅರಣ್ಯ ಇಲಾಖೆಯು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ಸತತವಾಗಿ ವಿಫಲವಾಗುತ್ತಲೇ ಬಂದಿದೆ. ರೈತರ ಪ್ರತಿಭಟನೆಗಳು, ಗ್ರಾಮಸ್ಥರ ಆಕ್ರೋಶಗಳು ಆಗಿಂದ್ದಾಗಿಯೇ ಅರಣ್ಯ ಇಲಾಖೆಯ ಮೇಲೆ ಕಂಡು ಬಂದಾಗ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡರೂ ಇಲ್ಲಿಯ ತನಕ ಇದರಿಂದ ಯಾವುದೇ ನಿರೀಕ್ಷಿತ ಫಲಿತಾಂಶಗಳು ದೊರಕಿದಂತೆ ಕಂಡು ಬರುತ್ತಿಲ್ಲ.
ಆನೆ - ಮಾನವ ಸಂಘರ್ಷವನ್ನು ತಗ್ಗಿಸಲು ಇಲಾಖೆಯ ಕ್ರಮಗಳು ಫಲ ಲಭಿಸುತ್ತಿಲ್ಲ. ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಗಳು ಶಾಶ್ವತ ಪರಿಹಾರವನ್ನು ನೀಡಿಲ್ಲ ಇದಕ್ಕಾಗಿ ಇಲಾಖೆಯಿಂದ ಸಾಕಷ್ಟು ಹಣವು ಖರ್ಚಾಗುತ್ತಿದೆ. ಅರಣ್ಯ ಗಡಿಭಾಗಕ್ಕೆ ಹೊಂದಿಕೊAಡಿರುವ ಅನೇಕ ಪ್ರದೇಶಗಳಲ್ಲಿ ರೈಲ್ವೇ ಬ್ಯಾರಿಕೇಡ್, ಸೋಲಾರ್ ಹ್ಯಾಂಗಿAಗ್ ಫೆನ್ಸ್, ತಡೆಗೋಡೆಗಳು, ಆನೆ ನಿರೋಧಕ ಕಂದಕಗಳು ಹಾಗೂ ಸೌರ ಬೇಲಿಗಳು ನಿರ್ಮಿಸಿದ್ದರೂ ಇವುಗಳನ್ನು ದಾಟಿ ಆನೆಗಳು ಜನನಿಬಿಢ ಪ್ರದೇಶಕ್ಕೆ ಲಗ್ಗೆಇಡುತ್ತಿವೆ. ಇದರಿಂದಾಗಿ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಕಾರ್ಮಿಕರು, ಜನಸಾಮಾನ್ಯರಿಗೆ ಎದುರಾಗುವ ಈ ಕಾಡಾನೆಗಳಿಂದ ಸಂಚಾಕಾರ ಎದುರಾಗಿದ್ದು ಈಗಾಗಲೇ ಸಾವು ನೋವುಗಳು ಕಂಡು ಬಂದಿವೆ.
ಪುನರಾವರ್ತಿತ ಹಾಗೂ ಪರಿಣಾಮಕಾರಿಯಲ್ಲದ ಕ್ರಮದಿಂದ ಒಂದು ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಓಡಿಸಲ್ಪಟ್ಟ ಆನೆಗಳು ಅದೇ ದಿನ ಅಥವಾ ಕೆಲವೇ ಗಂಟೆಗಳಲ್ಲಿ ಪಕ್ಕದ ತೋಟಗಳಿಗೆ ಪ್ರವೇಶಿಸಿ ಅಲ್ಲಿನ ಜನರ ಸಮಸ್ಯೆಗೆ ಕಾರಣವಾಗುತ್ತಿದೆ.
ರೈತರು ತಮ್ಮ ಅಸ್ತಿ ನಷ್ಟ ಹಾಗೂ ಜೀವಭದ್ರತಾ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ. ಕಾಡಾನೆಯ ನಿರಂತರ ಉಪಟಳದ ಪರಿಣಾಮವಾಗಿ ರೈತರು ಬೆಳೆ ಹಾನಿ ಸಂಭವಿಸುತ್ತಿವೆ. ಆನೆ - ಮಾನವ ಸಂಘರ್ಷ ಕಡಿಮೆ ಮಾಡುವ ಸಲುವಾಗಿ ಆನೆ ಹಿಂಡುಗಳುಳ್ಳ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ವೇಗ ಹೆಚ್ಚಿಸಬೇಕಾಗಿದೆ.
ರಾತ್ರಿಯ ವೇಳೆ ವನ್ಯ ಪ್ರಾಣಿಗಳಿಗೆ ಹಾನಿಯಾಗದ ಬೆಳಕು ಮತ್ತು ಧ್ವನಿ ಆಧಾರಿತ ಮಾರ್ಗದರ್ಶನ ವ್ಯವಸ್ಥೆಗಳನ್ನು ಜಾರಿಗೊಳಿಸಬೇಕಿದೆ.ಆಯ್ದ ಅರಣ್ಯ ಪ್ರದೇಶಕ್ಕೆ ಕಾಡಾನೆ ಓಡಿಸುವ ಕಾರ್ಯಾಚರಣೆಗೆ ಡ್ರೋನ್ ಹಾಗೂ ವೈಜ್ಞಾನಿಕ ತಂತ್ರಜ್ಞಾನ ಬಳಸಬೇಕು.
ಕಾರ್ಯಾಚರಣೆ ತಂಡವು ಅರಣ್ಯ ಪ್ರದೇಶದ ಅಂಚಿನಲ್ಲಿ ಶೆಡ್‌ಗಳನ್ನು ನಿರ್ಮಿಸಿ ಕಾಡಾನೆಗಳು ನಾಡಿಗೆ ನುಸುಳುವ ವೇಳೆ ಅಲ್ಲಿಂದಲೇ ಕಾರ್ಯಾಚರಣೆ ಆರಂಭಿಸಬೇಕು. ಜನನಿಬಿಡ ಪ್ರದೇಶಕ್ಕೆ ಹಾಗೂ ರೈತರ ತೋಟಗಳಿಗೆ ಕಾಡಾನೆಗಳು ಲಗ್ಗೆಇಟ್ಟ ನಂತರ ಕಾರ್ಯಾಚರಣೆ ಆರಂಭಿಸಿದಲ್ಲಿ ನಿರೀಕ್ಷಿತ ಫಲಿತಾಂಶಗಳು ಲಭಿಸುವುದಿಲ್ಲ. ಆಯ್ದ ಸ್ಥಳಗಳಲ್ಲಿ ಕಾಡಾನೆಯ ಕಾರ್ಯಾಚರಣೆಗಾಗಿಯೇ ವಾಚ್ ಟವರ್‌ಗಳನ್ನು ನಿರ್ಮಿಸಬೇಕು. ಹಿಂಡು ಹಿಂಡು ಆನೆ ಬರುವ ಗುಂಪಿನಲ್ಲಿ ಕೆಲವು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಆ ಮೂಲಕ ಲಭಿಸುವ ಸಿಗ್ನಲ್‌ಗಳನ್ನು ಗ್ರಹಿಸಿ ಆನೆಗಳನ್ನು ಅಲ್ಲಿಂದಲೇ ವಾಪಸ್ಸು ಕಳುಹಿಸುವ ಪ್ರಯತ್ನಗಳು ಮುಂದುವರೆಯಬೇಕು. ಇಂತಹ ತೀರ್ಮಾನಗಳನ್ನು, ಕ್ರಮಗಳನ್ನು ಅಧಿಕಾರಿಗಳು ಅತ್ಯಂತ ಜರುರಾಗಿ ಕೈಗೊಂಡಲ್ಲಿ ಆನೆ - ಮಾನವ ಸಂಘರ್ಷವನ್ನು ಒಂದಷ್ಟು ಮಟ್ಟಿಗೆ ನಿಯಂತ್ರಣಕ್ಕೆ ತರಬಹುದಾಗಿದೆ. - ಹೆಚ್.ಕೆ. ಜಗದೀಶ್