ಸೋಮವಾರಪೇಟೆ, ಜೂ. ೨೦: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಬಾಣೆ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ, ಕ್ಲಬ್‌ಗೆ ಸೇರಿದ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಕ್ಲಬ್ ವತಿಯಿಂದ ಬೇಲಿ ಹಾಕಲಾಗಿದೆ. ಸದ್ಯ ಈ ಬಗೆಗಿನ ತಕರಾರಿಗೆ ನ್ಯಾಯಾಲಯದ ಮೊರೆಹೋಗಿದ್ದು, ಸರ್ಕಾರದ ವಿವಿಧ ಇಲಾಖೆಗಳ ಮುಂದಿನ ಕ್ರಮವನ್ನು ನೋಡಿಕೊಂಡು ಕ್ಲಬ್ ಮುಂದುವರೆಯುತ್ತದೆ ಎಂದು ಬೇಳೂರು ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಳೂರು ಕ್ಲಬ್‌ಗೆ ೧೨೧ ವರ್ಷಗಳ ಇತಿಹಾಸವಿದೆ. ಕ್ಲಬ್‌ನ ವತಿಯಿಂದ ಪ್ರತಿ ವರ್ಷ ಗಾಲ್ಫ್ ಕ್ರೀಡೆಯನ್ನು ಆಯೋಜಿಸಿಕೊಂಡು ಬರಲಾಗು ತ್ತಿದೆ. ದೇಶದಲ್ಲಿಯೇ ೩ನೇ ಅತಿ ದೊಡ್ಡ ಕ್ರೀಡಾಕೂಟ ಇಲ್ಲಿ ನಡೆಯುತ್ತಿದೆ. ಬೇಳೂರು ಕ್ಲಬ್‌ಗೆ ೨೯.೩೨ ಏಕರೆ ಜಾಗವಿದ್ದು, ಈ ಜಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೇಲಿ ಅಳವಡಿಸಲಾಗಿದೆ ಎಂದರು.

ಬೇಳೂರು ಕ್ಲಬ್‌ಗೆ ಸೇರಿರುವ ೨೯.೩೨ ಏಕರೆ ಜಾಗವನ್ನು ಗಡಿ ಗುರುತಿಸಿ, ಹದ್ದುಬಸ್ತು ಮಾಡಿ ದಾಖಲಾತಿ ಒದಗಿಸುವಂತೆ ಹಲವಷ್ಟು ಬಾರಿ ಕಂದಾಯ ಹಾಗೂ ಸರ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆ ಕ್ಲಬ್‌ನ ಸ್ವಾಧೀನಾನುಭವದಲ್ಲಿರುವ ಜಾಗಕ್ಕೆ ಬೇಲಿ ಹಾಕಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬಾಣೆ ಜಾಗದಲ್ಲಿ ಒಂದು ಕೊಲೆ ನಡೆದಿತ್ತು. ಇದರೊಂದಿಗೆ ಬೇರೆಡೆ ಹತ್ಯೆ ಮಾಡಿದ ವ್ಯಕ್ತಿಯೋರ್ವರ ಮೃತದೇಹವನ್ನು ಇಲ್ಲಿಗೆ ತಂದು ಎಸೆಯಲಾಗಿತ್ತು. ಬೇಲಿ ಇಲ್ಲದ್ದರಿಂದ ನಿರಂತರ ಮೋಜು ಮಸ್ತಿ ಮಾಡುವುದು, ಅಡುಗೆ ತಯಾರಿ, ಮದ್ಯ ಸೇವನೆ, ಮಾದಕ ವಸ್ತುಗಳ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸೇವನೆಯಂತಹ ಕೃತ್ಯಗಳು ನಡೆಯುತ್ತಿದ್ದವು. ಇದರಿಂದಾಗಿ ಗಾಲ್ಫ್ ಕ್ರೀಡೆಗೆ ಸಮಸ್ಯೆಯಾಗಿತ್ತು. ಇವುಗಳಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಬೇಲಿ ಅಳವಡಿಕೆ ಅನಿವಾರ್ಯವಾಗಿತ್ತು ಎಂದರು. ಇದರಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆಯಿಲ್ಲ. ಬೇಲಿಹಾಕುವ ಮೂಲಕ ಅನೈತಿಕ ಚಟುವಟಿಕೆಗಳಿಗೆ ತಡೆಬಿದ್ದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಗಾಲ್ಫ್ ಅಕಾಡೆಮಿ ಸ್ಥಾಪನೆ ಮಾಡುವ ಉದೇಶವನ್ನು ಕ್ಲಬ್ ಹೊಂದಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿದ್ದ ಕ್ಲಬ್‌ನ ಗೌರವ ಕಾರ್ಯದರ್ಶಿ ಪವನ್ ಮುತ್ತಪ್ಪ ಮಾತನಾಡಿ, ಸರ್ಕಾರಿ ಜಾಗವನ್ನು ಕ್ಲಬ್‌ನವರು ಒತ್ತುವರಿ ಮಾಡಿಲ್ಲ. ನಮ್ಮ ಜಾಗಕ್ಕಷ್ಟೇ ಬೇಲಿ ಹಾಕಲಾಗಿದೆ. ಇತ್ತೀಚೆಗೆ ಕೆಲವರು ಬೇಲಿ ಹಾಕಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡುತ್ತಿದ್ದಾರೆ. ೧೨೧ ವರ್ಷ ಇತಿಹಾಸವಿರುವ ಕ್ಲಬ್ ಆಸ್ತಿಯನ್ನು ಉಳಿಸಿಕೊಳ್ಳಬೇಕಿದೆ. ಕ್ಲಬ್‌ನಲ್ಲಿ ೧೮೦ಕ್ಕೂ ಅಧಿಕ ಸದಸ್ಯರಿದ್ದು, ೧೦೦ಕ್ಕೂ ಹೆಚ್ಚಿನ ಸದಸ್ಯರು ಸ್ಥಳೀಯರೇ ಆಗಿದ್ದಾರೆ. ಕ್ಲಬ್ ಹಾಗೂ ಬೇಳೂರು, ಕುಸುಬೂರು ಗ್ರಾಮಸ್ಥರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದರು.

ಕ್ಲಬ್ ಪರ ವಕೀಲ ಶಮಂತ್ ಡಿ. ಕುಮಾರ್ ಮಾತನಾಡಿ, ಕ್ಲಬ್‌ಗೆ ಸಂಬAಧಿಸಿದAತೆ ೧೩ ಸರ್ವೆ ನಂಬರ್‌ಗಳಲ್ಲಿ ೩೦ ಏಕರೆಯ ಆಸುಪಾಸು ಜಾಗವಿದೆ. ಬೇಲಿ ಅಳವಡಿಕೆಯ ನಂತರ ಸರ್ಕಾರಿ ಜಾಗವನ್ನೂ ಸೇರಿಸಿ ಬೇಲಿ ಹಾಕಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕ್ಲಬ್‌ನ ಸ್ವಾದೀನಾನುಭವ ಇದ್ದ ಜಾಗಕ್ಕೆ ಮಾತ್ರ ಬೇಲಿ ಹಾಕಲಾಗಿದೆ. ಒಂದು ವೇಳೆ ಸರ್ಕಾರಿ ಜಮೀನು ಇದ್ದರೆ ಅದು ಎಲ್ಲಿದೆ ಎಂಬುದನ್ನು ನಮಗೆ ತೋರಿಸಲಿ. ನಮ್ಮ ಬಳಿ ಇರುವ ದಾಖಲಾತಿಗಳನ್ನು ಒಟ್ಟುಗೂಡಿಸಿ ಈಗಾಗಲೇ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದು, ಮುಂದಿನ ೬ ತಿಂಗಳ ಒಳಗೆ ಇಡೀ ಜಾಗವನ್ನು ಸರ್ವೆ ಮಾಡಿಸಿ ವರದಿ ನೀಡುವಂತೆ ಕೋರ್ಟ್ ತಿಳಿಸಿದೆ. ಅಲ್ಲಿಯವರೆಗೂ ಕಾದು ನೋಡಬೇಕಿದೆ ಎಂದರು.

ಕಳೆದ ತಾ. ೧೦ ರಂದು ನ್ಯಾಯಾಲಯದಲ್ಲಿ ಈ ಬಗ್ಗೆ ಆದೇಶವಾಗಿದೆ. ತಾ. ೧೨ಕ್ಕೆ ತಹಶೀಲ್ದಾರ್ ಅವರು ಕ್ಲಬ್‌ಗೆ ನೋಟೀಸ್ ನೀಡಿದ್ದಾರೆ. ತಾ. ೧೫ರಂದು ತಾಲೂಕು ಕಚೇರಿಗೆ ಪತ್ರ ಬರೆದು ನ್ಯಾಯಾಲಯದ ತಡೆಯಾಜ್ಞೆಯ ಬಗ್ಗೆ ತಿಳಿಸಲಾಗಿದೆ. ೧೭ ರಂದು ಅಧಿಕೃತ ಆದೇಶ ನೀಡಲಾಗಿದೆ. ಹೈಕೋರ್ಟ್ ನಮ್ಮ ೩೦ ಏಕರೆ ಜಾಗದ ಜೊತೆಗೆ, ಪ್ರವಾಸೋದ್ಯಮ ಇಲಾಖೆಯ ಜಾಗ ಸೇರಿದಂತೆ ಇನ್ನಿತರ ಜಾಗಗಳನ್ನೂ ಒಟ್ಟು ಸೇರಿಸಿ ಹದ್ದುಬಸ್ತು ಸರ್ವೆ ಮಾಡಿ, ಗಡಿ ಗುರುತಿಸಿದ ನಂತರ ಬೇಲಿ ತೆರವಿಗೆ ಸೂಚಿಸಿದೆ. ಕ್ಲಬ್‌ಗೆ ಸೇರಿದ ೨೯.೩೨ ಏಕರೆ ಜಾಗವನ್ನು ಇಲಾಖೆಯೇ ಗುರುತಿಸಿ ಕೊಡಲಿ; ನಂತರ ಫೆನ್ಸಿಂಗ್ ತೆರವು ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕ್ಲಬ್‌ನ ಸದಸ್ಯರಾದ ಹೇಮಂತ್, ರವಿ ಪ್ರತಾಪ್ ಇದ್ದರು.