ಪಾಲಿಬೆಟ್ಟ, ಜೂ. ೧೬: ಪಾಲಿಬೆಟ್ಟ ಶಾಖೆಯ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾಗಿ ಟಿ.ವೈ. ಮುರುಳಿ ಹಾಗೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಪದಗ್ರಹಣ ಕಾರ್ಯಕ್ರಮ ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್ ಕುಮಾರ್ ನೆರವೇರಿಸಿ ಮಾತನಾಡಿ, ಸಮಾಜದ ಎಲ್ಲಾ ಸದಸ್ಯರುಗಳು ಒಗ್ಗಟ್ಟಿನಿಂದ ಇರಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಸೇವೆಯನ್ನು ಮಾಡಿಕೊಂಡು ಬರುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಶಾ ಮೋಹನ್ ನೂತನ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ವೈ. ಮುರುಳಿ ಮಾತನಾಡಿ, ಎಲ್ಲಾ ಸದಸ್ಯರು ಒಗ್ಗೂಡಿ ಸಮಾಜಮುಖಿ ಕೆಲಸವನ್ನು ಮಾಡಬೇಕಾಗಿದೆ. ಸಮಾಜದ ಸದಸ್ಯರ ಕುಟುಂಬಗಳಿಗೆ ತೊಂದರೆಯಾದಲ್ಲಿ ತಕ್ಷಣವೇ ಸ್ಪಂದಿಸುವುದು ನಮ್ಮ ಗುರಿ ಎಂದರು.

ನೂತನ ಆಡಳಿತ ಮಂಡಳಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಬಂಡೆ, ಖಜಾಂಚಿಯಾಗಿ ಮಧುಸೂದನ್, ಗೌರವ ಅಧ್ಯಕ್ಷರಾಗಿ ರಿನೀಶ್ ವಿ.ಬಿ., ಉಪಾಧ್ಯಕ್ಷರುಗಳಾಗಿ ಸಾಯುಜ್, ಮಂಜುಳಾ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ನಿರ್ದೇಶಕರುಗಳಾಗಿ ಶಶಿ ಎಂ.ಎಸ್., ಪ್ರಿಯಾ ಚಂದ್ರನ್, ಶೀಲಾ ಅನಿಲ್, ಸುರೇಂದ್ರ, ಅಖಿಲ್ ಎಂ.ಎ., ಗಂಗಾಧರ್ ಪಿ.ಕೆ., ನಳಿನಿ ದುರ್ಗಾ, ಅಭಿನಂದನ್ ವಿ.ಪಿ., ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಸಿ.ಯು. ರಾಧಾಕೃಷ್ಣ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶರತ್‌ಕಾಂತ್, ಖಜಾಂಚಿ ಶಾಜಿ ಅಚ್ಯುತ್ತನ್, ಉಪಾಧ್ಯಕ್ಷೆ ಪುಷ್ಪಾ ಮನೋಜ್ ಉಪಸ್ಥಿತರಿದ್ದರು.