ಶನಿವಾರಸಂತೆ, ಜೂ. ೧೬: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.
ನಂತರ ಶಾಸಕರು ಮಾತನಾಡಿ, ಆಟೋ ಚಾಲಕರ ಸೇವೆ ಮಹತ್ವದಾಗಿದೆ. ಎಲ್ಲೆಡೆ ಆಟೋ ನಿಲ್ದಾಣಗಳಿರುವ ಹಾಗೇ ಶನಿವಾರಸಂತೆಯಲ್ಲೂ ಒಂದು ಆಟೋ ನಿಲ್ದಾಣ ಬೇಕು ಎಂಬ ಆಟೋ ಚಾಲಕರ - ಮಾಲೀಕರ ಸಂಘದ ಬೇಡಿಕೆಗೆ ಸ್ಪಂದಿಸಿ ಭೂಮಿಪೂಜೆ ಮಾಡಲಾಗಿದೆ. ಮಡಿಕೇರಿ ಕ್ಷೇತ್ರದ ಗ್ರಾಮೀಣ ಭಾಗದಿಂದ ಹಿಡಿದು ಎಲ್ಲಾ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿದ್ದು, ಅಭಿವೃದ್ಧಿಯಾಗುತ್ತಿದೆ. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿವೆ. ಶನಿವಾರಸಂತೆ ನಾಗರಿಕರ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿದೆ ಎಂದರು.
ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ಜೆ.ಎಲ್.ಜನಾರ್ಧನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ. ಚಂದ್ರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಜೆ. ಗಿರೀಶ್, ಆದಿತ್ಯ ಗೌಡ, ಆಟೋ ಚಾಲಕರ - ಮಾಲೀಕರ ಸಂಘದ ಅಧ್ಯಕ್ಷ ರವಿ, ಪದಾಧಿಕಾರಿಗಳು, ಪ್ರಮುಖರಾದ ಅಪ್ಪಸ್ವಾಮಿ, ಹರೀಶ್, ಶೇಷಗಿರಿ ಮತ್ತಿತರರು ಹಾಜರಿದ್ದರು.