ಮಡಿಕೇರಿ, ಜೂ. ೧೬: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಯನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕ ಸಮಿತಿ ವತಿಯಿಂದ ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಜನಜಾಗೃತಿ ಜಾಥಾ ನಡೆಯಿತು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಪ್ರಜಾಸತಾತ್ಮಕ ಮೌಲ್ಯವನ್ನು ಕಸಿಯುವ ಷಡ್ಯಂತ್ರ ಈ ಪ್ರಕ್ರಿಯೆಯ ಹಿಂದೆ ಅಡಗಿದೆ. ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಜನರದ್ದಾಗಿದ್ದರೂ, ಈಗ ಜನರನ್ನು ರಾಜಕಾರಣಿಗಳೇ ಆಯ್ಕೆ ಮಾಡುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂವಿಧಾನ ಪರಿಚ್ಛೇದ ೫ನ್ನು ನಿಷ್ಕಿçಯೆ ಮಾಡುವ ಹಾಗೂ ದಲಿತರು, ಆದಿವಾಸಿ, ಹಿಂದುಳಿದವರ ಮತದಾನ ಹಕ್ಕು ಕಸಿಯುವ ಚಿಂತನೆ ನಡೆಯುತ್ತಿದೆ ಎಂದು ದೂರಿದರು.
ಭಾರತದಲ್ಲಿರುವ ನುಸುಳುಕೋರರನ್ನು ಪತ್ತೆಹಚ್ಚುವ ನೆಪದಲ್ಲಿ ಭಾರತದಲ್ಲಿರುವ ಆದಿವಾಸಿಗಳು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ದೇಶದಿಂದ ದೂರವಿಡುವ ಪ್ರಯತ್ನವೂ ನಡೆಯುತ್ತಿದ್ದು, ಬಿಹಾರದಲ್ಲಿ ೬೫ ಲಕ್ಷ ನುಸುಳುಕೋರರಿದ್ದಾರೆ ಎಂಬ ಆರೋಪವನ್ನು ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಬಿಹಾರದಲ್ಲಿ ಕೇವಲ ೨ ಜನ ಮಾತ್ರ ಅಕ್ರಮವಾಸಿಗಳು ಪತ್ತೆಯಾಗಿದ್ದಾರೆ. ಎಸ್‌ಐಆರ್‌ನಿಂದ ಅಲೆಮಾರಿಗಳು, ಬೇರೆ ರಾಜ್ಯ ಹಾಗೂ ಊರಿನಲ್ಲಿ ನೆಲೆಸಿರುವರು, ಹಿಂದುಳಿದವರು ಅತಂತ್ರರಾಗುವ ಭೀತಿಯಿದ್ದು, ಈ ಪ್ರಕ್ರಿಯೆಗೆ ಜಿಲ್ಲಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಸಾಹಿತಿ ಜೆ. ಸೋಮಣ್ಣ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಾದರೂ, ಅದನ್ನು ಅವೈಜ್ಞಾನಿಕವಾಗಿ ನಡೆಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಅನ್ನು ಪರಿಗಣಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಆದಿವಾಸಿ ಸಮುದಾಯದ ಬಳಿ ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳು ಇಲ್ಲದಿರುವುದರಿಂದ ಅವರು ಮತದಾನ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಪಡೆಯ ಸುರೇಶ್, ಎಸ್‌ಡಿಪಿಐ ಪ್ರಮುಖರಾದ ಮನ್ಸೂರ್, ಹನೀಫ್, ಪ್ರಗತಿಪರ ಚಿಂತಕ ಅಲ್ಲಾರಂಡ ವಿಠಲ ನಂಜಪ್ಪ, ವಿವಿಧ ಸಂಘಟನೆಗಳ ಪ್ರಮುಖರಾದ ಹೆಚ್.ಎಸ್. ಪ್ರಕಾಶ್, ವೈ.ಎಂ. ಸುರೇಶ್, ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಅಣ್ಣಪ್ಪ, ಸುರೇಶ್, ಲಕ್ಷö್ಮಣ್, ಸಮಿತಿಯ ಉಸ್ತುವಾರಿ ಹೇಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.