ವೀರಾಜಪೇಟೆ, ಜೂ. ೧೬: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ವೀರಾಜಪೇಟೆಯಲ್ಲಿ ಹೆಚ್‌ಪಿವಿ ಲಸಿಕೆ (ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಚುಚ್ಚುಮದ್ದು) ಬಗ್ಗೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್, ಆರೋಗ್ಯ ನಿರೀಕ್ಷಣಾ ಅಧೀಕ್ಷಕಿ ಬಿ.ಎಸ್. ದುಂಭಿತ, ಶುಶ್ರೂಷಕಿ ಭವ್ಯ ಅವರು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಚುಚ್ಚುಮದ್ದು ಬಗ್ಗೆ ಮಾಹಿತಿ ನೀಡಿ ಮಾತನಾಡಿ, ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮಾಸವು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದ್ದು, ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ರೋಗ ನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವ ಶಿಫಾರಸುಗಳ ಮಹತ್ವವನ್ನು ಒತ್ತಿಹೇಳಲು ಹಲವಾರು ಅಭಿಯಾನಗಳು ಮತ್ತು ಚಟುವಟಿಕೆಗಳ ಮೂಲಕ ಗರ್ಭಕಂಠದ ಕ್ಯಾನ್ಸರ್‌ನ ಜಾಗೃತಿ ಮೂಡಿಸಲು ವಿವಿಧ ಅಂತರರಾಷ್ಟಿçÃಯ ಮತ್ತು ಸ್ಥಳೀಯ ಗುಂಪುಗಳು ಒಟ್ಟಾಗಿ ಸೇರಿಕೊಂಡಿವೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ. ೨೫ ರಿಂದ ೬೫ ವರ್ಷ ವಯಸ್ಸಿನ ಮಹಿಳೆಯರು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರಾಥಮಿಕ ಹೆಚ್‌ಪಿವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ೧೭ ಮಕ್ಕಳಿಗೆ ಚುಚ್ಚುಮದ್ದು ನೀಡಲಾಯಿತು. ಮತ್ತು ಡೆಂಗ್ಯು ಜ್ವರ ಕುರಿತಂತೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಪೋಕ್ಸೋ, ಗುಡ್ ಟಚ್, ಬ್ಯಾಡ್ ಟಚ್, ಹದಿಹರೆಯದ ಸಮಸ್ಯೆ ಬಗ್ಗೆ ತಿಳಿಸಲಾಯಿತು. ಬಳಿಕ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಯಿತು. ಈ ಸಂದರ್ಭ ನಿಲಯದ ಮೇಲ್ವಿಚಾರಕಿ ಸುಮಯ್ಯ ಕೆ.ಎಂ. ಮತ್ತು ಸಿಬ್ಬಂದಿ ಹಾಜರಿದ್ದರು.