ಚೆಟ್ಟಳ್ಳಿ, ಜೂ. ೧೬ : ಮಳೆಗಾಲದ ಆಗಮನದ ಮುನ್ನವೇ ಕೊಡಗಿನ ತೋಟಗಳಲ್ಲಿ ಚಿನ್ನದ ಬಣ್ಣದಿಂದ ಕಂಗೊಳಿಸುವ ಬೇಸಿಗೆ ಕಿತ್ತಳೆ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕಾಲದಲ್ಲಿ “ಕೊಡಗಿನ ಕಿತ್ತಳೆ” ಎಂದೇ ದೇಶಾದ್ಯಂತ ಖ್ಯಾತಿ ಪಡೆದಿದ್ದ ಈ ಹಣ್ಣು, ಹಲವು ವರ್ಷಗಳ ಏರಿಳಿತಗಳ ಬಳಿಕ ಮತ್ತೆ ರೈತರ ತೋಟಗಳಲ್ಲಿ ಸಮೃದ್ಧ ಫಸಲಿನೊಂದಿಗೆ ಮರಳಿದೆ. ಮಳೆಗಾಲ ಆರಂಭವಾಗುವ ಮೊದಲೇ ಕೊಯ್ಲಿಗೆ ಸಿದ್ಧವಾಗುವ ಈ ಕಿತ್ತಳೆ ತನ್ನ ವಿಶಿಷ್ಟ ಸುವಾಸನೆ, ಸಿಹಿ-ಹುಳಿ ಮಿಶ್ರಿತ ರುಚಿ ಹಾಗೂ ರಸಭರಿತ ಗುಣಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಲವು ವರ್ಷಗಳ ಕಾಲ ಉತ್ತಮ ಫಸಲು ನೀಡಿದ್ದ ಅನೇಕ ಕಿತ್ತಳೆ ಗಿಡಗಳು ರೋಗಬಾಧೆ, ಹವಾಮಾನ ವೈಪರಿತ್ಯ ಹಾಗೂ ಬೇರು ಕೊಳೆ ಸಮಸ್ಯೆಯಿಂದ ಸತ್ತುಹೋಗಿದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ಇಳುವರಿ ಕುಸಿದಿತ್ತು. ಆದರೆ ಈ ಬಾರಿ ಹವಾಮಾನ ಅನುಕೂಲಕರವಾಗಿದ್ದ ಪರಿಣಾಮ ಮರಗಳಲ್ಲಿ ಉತ್ತಮ ಪ್ರಮಾಣದಲ್ಲಿ ಹಣ್ಣು ಕಟ್ಟಿದ್ದು, ಫಸಲು ಆಶಾದಾಯಕವಾಗಿದೆ ಎಂದು ಮಡಿಕೇರಿ ತಾಲೂಕಿನ ದೇವಸ್ತೂರು-ಕಾಲೂರು ಗ್ರಾಮದ ಕಿತ್ತಳೆ ಬೆಳೆಗಾರ ಚಾಮೇರ ಸಂತು ಜಗನ್ ತಿಳಿಸಿದ್ದಾರೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಕಿತ್ತಳೆ ಮರಗಳು ಹಣ್ಣುಗಳಿಂದ ತುಂಬಿದ್ದು ಮಳೆಯ ಮುನ್ನವೇ ಮಾರುಕಟ್ಟೆಗೆ ಬರುತ್ತಿರುವ ಈ ಹಣ್ಣು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ. ಕೊಡಗಿನ ಸಾಂಪ್ರದಾಯಿಕ ತೋಟಗಾರಿಕಾ ಬೆಳೆಯಾಗಿ ಗುರುತಿಸಿಕೊಂಡಿರುವ ಕಿತ್ತಳೆ ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಕಾಫಿ ತೋಟಗಳ ನಡುವೆ ಬೆಳೆಯುವ ಬೇಸಿಗೆ ಕಿತ್ತಳೆ ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡುವುದರ ಜೊತೆಗೆ ಕೊಡಗಿನ ಕೃಷಿ ವೈವಿಧ್ಯತೆಯ ಸಂಕೇತವಾಗಿಯೂ ಗುರುತಿಸಿಕೊಂಡಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲದೆ ನೆರೆಯ ಜಿಲ್ಲೆಗಳಲ್ಲಿಯೂ ಕೊಡಗಿನ ಕಿತ್ತಳೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಬಾರಿ ಉತ್ತಮ ಬೆಲೆ ದೊರೆಯುವ ನಿರೀಕ್ಷೆ ರೈತರಲ್ಲಿದೆ.
ಮಳೆಗಾಲದ ಹೊಸ್ತಿಲಲ್ಲಿ ಕಂಗೊಳಿಸುತ್ತಿರುವ ಬೇಸಿಗೆ ಕಿತ್ತಳೆ, ಕೊಡಗಿನ ಕೃಷಿ ಪರಂಪರೆಯ ಸಿಹಿ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ್ದು, ಸಂಕಷ್ಟಗಳನ್ನು ಎದುರಿಸಿದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಚಿನ್ನದ ಬಣ್ಣದ ಈ ಹಣ್ಣು ಮತ್ತೊಮ್ಮೆ ಕೊಡಗಿನ ತೋಟಗಳಿಗೆ ಚೈತನ್ಯ ತುಂಬುತ್ತಿದ್ದು, ಭವಿಷ್ಯದ ಉತ್ತಮ ದಿನಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
- ಪುತ್ತರಿರ ಕರುಣ್ ಕಾಳಯ್ಯ