ಮಡಿಕೇರಿ, ಜೂ. ೧೬: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಜೀವನ ಸಂಕಷ್ಟದಲ್ಲಿರುವವರು, ವಿದ್ಯಾರ್ಥಿಗಳು, ವಿಶೇಷಚೇತನರು ಸೇರಿದಂತೆ ೭೦ ಮಂದಿಗೆ ರೂ. ೩ ಲಕ್ಷ ಮೌಲ್ಯದ ಸವಲತ್ತು ವಿತರಿಸಲಾಯಿತು.

ನಗರದ ಅಂಬೇಡ್ಕರ್ ಭವನದಲ್ಲಿ ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಆಯೋಜಿತ ಜಿಲ್ಲಾಮಟ್ಟದ ವಾರ್ಷಿಕ ಕಾರುಣ್ಯ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಾದ್ಯಂತಲಿನ ಮಕ್ಕಳು, ಮಹಿಳೆಯರು ಸೇರಿದಂತೆ ೭೦ ಅರ್ಹ ಫಲಾನುಭವಿಗಳು ಸವಲತ್ತು ಸ್ವೀಕರಿಸಿ ಧನ್ಯರಾದರು.

ಅದಾಯ ಮಾರ್ಗವಿಲ್ಲದೆ ಬಲುಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಉತ್ತಮ ದರ್ಜೆಯ ಆಹಾರದ ಕಿಟ್, ಅನಾರೋಗ್ಯದಿಂದ ಬಳಲುತ್ತಿದ್ದವರ ಮಂದಿಯ ಚಿಕಿತ್ಸೆಗೆ ತಲಾ ೫ ಸಾವಿರ ರೂಪಾಯಿ ಹಾಗೂ ವಿದ್ಯೆ ಕಲಿಯುವ ಕಷ್ಟದ ಕುಟುಂಬದ ಮಕ್ಕಳಿಗೆ ಪಠ್ಯ ಪರಿಕರ ಸೇರಿದಂತೆ ಒಟ್ಟು ೭೦ ಮಂದಿಗೆ ರೂ. ೩ ಲಕ್ಷ ವೆಚ್ಚದಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು.

ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಕಾರುಣ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಕ್ಕೂಟದ ಪುಣ್ಯ ಕಾರ್ಯವನ್ನು ಪ್ರಶಂಶಿಸಿದರು. ಸಮಾಜದಲ್ಲಿ ಇಂತಹ ಸಂಸ್ಥೆಗಳಿAದ ನೊಂದವರ ಕಣ್ಣೀರೊರೆಸುವ ಕಾರ್ಯವಾಗುತ್ತಿದೆ. ಅಗತ್ಯವುಳ್ಳವರಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತಿರುವುದು ಅತ್ಯಂತ ದೊಡ್ಡ ಮಾನವೀಯ ಕಾರ್ಯವಾಗಿದೆ ಎಂದೂ ನಂದಕುಮಾರ್ ಶ್ಲಾಘಿಸಿದರು.

ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಒಕ್ಕೂಟದ ಜನೋಪಯೋಗಿ ಕೆಲಸ ಕಾರ್ಯಗಳು ಸಮಾಜದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರಲ್ಲದೇ, ಸಾರ್ವಜನಿಕರಿಂದ ದೇಣಿಗೆಯನ್ನು ಪಡೆಯದೆ ವಾಟ್ಸಾö್ಯಪ್ ಗ್ರೂಪ್ ಮೂಲಕವೇ ಒಕ್ಕೂಟದ ೧೯೦ ಸದಸ್ಯರ ಸಹಕಾರದೊಂದಿಗೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಸವಲತ್ತು ವಿತರಣಾ ಕಾರ್ಯಕ್ರಮ ನಡೆಸಿರುವುದು ನಿಜಕ್ಕೂ ವಿಸ್ಮಯ ಎಂದು ಹೇಳಿದರು. ಹಣ ಇದ್ದರೆ ಮಾತ್ರ ಸಾಲದು, ತನು, ಮನ ಕೂಡ ಧನದೊಂದಿಗೆ ಇದ್ದಾಗ ಇಂತಹ ಮಾನವೀಯ ಕಾರ್ಯ ಯಶಸ್ವಿಯಾಗುತ್ತದೆ ಎಂದು ನುಡಿದ ಅನಿಲ್ ಎಚ್.ಟಿ., ಅಶಕ್ತರಿಗೆ ನೆರವು ನೀಡುವ ಕೈಗಳಗೆ ಎಂದೂ ಧಣಿವು ಬಾರದೇ ಇರಲಿ ಎಂದು ಹಾರೈಸಿದರು.

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಮುಸ್ತಫ ಮಾದಾಪುರ ಒಕ್ಕೂಟದ ಮಾನವೀಯ ಚಟುವಟಿಕೆಗಳು ಮಾದರಿ ಯೋಗ್ಯವಾಗಿದೆ ಎಂದರು.

ಮಾನವೀಯ ಸ್ನೇಹಿತರ ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರುಣ್ಯ ಕಾರ್ಯಕ್ರಮದಲ್ಲಿ, ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ಸದಸ್ಯರಾದ ಚೆಟ್ರಂಡ ಲೀಲಾ ಮೇದಪ್ಪ, ಅಸ್ಮತ್ ಮಡಿಕೇರಿ - ಮಂಗಳೂರಿನ ಉದ್ಯಮಿ ಅಮಿತ್ ಡಿಸೋಜಾ ಒಕ್ಕೂಟದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಧ್ಯೇಯ ಗೀತೆಯೊಂದಿಗೆ ಪ್ರಾರಂಭಗೊAಡ ಸಮಾರಂಭದಲ್ಲಿ ಒಕ್ಕೂಟದ ವಕ್ತಾರ, ಪತ್ರಕರ್ತ ಎಂ.ಇ. ಮಹಮದ್ ವರದಿ ವಾಚಿಸಿದರು.

ಒಕ್ಕೂಟದ ಇಂದಿರಾ ಎ.ಹೆಚ್. ಸ್ವಾಗತಿಸಿ, ಒಕ್ಕೂಟದ ಪೊನ್ನಂಪೇಟೆ ಪ್ರತಿನಿಧಿ ಟಿ.ಆರ್. ವಿನೋದ್ ವಂದಿಸಿ, ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಅಡ್ಮಿನ್‌ಗಳಾದ ಕವಿತಾ ರಮೇಶ್, ಲೀಲಾವತಿ, ನಿಯಾಜ್ ಸುಂಟಿಕೊಪ್ಪ, ಕೆ.ಎಸ್. ಅನಿಲ್ ಕುಮಾರ್, ಹನೀಫ್ ಸೋನ, ದಶರಥ, ಚೀರಂಡ ಚಂಗಪ್ಪ, ಅಗ್ನಿ ಚೆನ್ನನಾಯಕ ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಒಕ್ಕೂಟದ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.