ವೀರಾಜಪೇಟೆ, ಜೂ. ೧೬: ಶ್ರಮಕ್ಕೆ ತಕ್ಕಫಲ ಭವಿಷ್ಯದಲ್ಲಿ ದೊರೆಯಲಿದೆ ಎಂದು ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ತರಬೇತುದಾರ ಹಾಗೂ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಶಾಂತ್ ರಾವ್ ಹೇಳಿದರು. ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಯೋಜಿಸಿದ್ದ ಸಿಇಟಿ, ಜೆಇಇ ಹಾಗೂ ನೀಟ್‌ನ ಉಚಿತ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಅಂಕಗಳನ್ನು ಗಳಿಸುತ್ತಾರೆ. ಆದರೆ ಸಿಇಟಿ, ಜೆಇಇ ಹಾಗೂ ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಸಾಕಷ್ಟು ಹಿಂದುಳಿಯುತ್ತಾರೆ. ನಗರ ಪ್ರದೇಶಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಕೈಗೊಳ್ಳುವ ಸಿದ್ಧತೆ ಅಥವಾ ಅದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಯ ಕಡೆಗೆ ಹೆಚ್ಚಿನ ಒತ್ತನ್ನು ನೀಡಿ ಪ್ರಥಮ ಪಿಯುಸಿಯಿಂದಲೇ ಅಗತ್ಯ ಸಿದ್ಧತೆಯನ್ನು ಕೈಗೊಂಡರೆ ಯಶಸ್ಸು ಸಾಧ್ಯ ಎಂದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಧರ್ಮಗುರು ಜೇಮ್ಸ್ ಡೊಮೆನಿಕ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭ ಕೇವಲ ಪುಸ್ತಕದಲ್ಲಿನ ವಿಚಾರವಲ್ಲದೆ ಜೀವನದ ಮೌಲ್ಯಭರಿತವಾದ ಪಾಠವನ್ನು ಕಲಿತು ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾಲೇಜಿನ ಉಪನ್ಯಾಸಕ ಡಾ. ಹೇಮಂತ್ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ಒಂದೇ ತಂಡದAತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಮಕ್ಕಳ ಭವಿಷ್ಯ ಹಸನಾಗುವುದು ನಿಶ್ಚಿತ ಎಂದರು. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಮದಲೈಮುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನೆ ಬದಲಾಯಿಸಬಲ್ಲದು. ಪೋಷಕರು ನೀಡುವ ಸಹಕಾರ ಬಹು ಅಮೂಲ್ಯವಾಗಿರುತ್ತದೆ ಎಂದರು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ೫೮೮ ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ನಿಶಿಕ ದೇಚಮ್ಮ ಹಾಗೂ ವಿಜ್ಞಾನ ವಿಭಾಗದಲ್ಲಿ ೫೮೬ ಅಂಕ ಪಡೆದ ಜೆಸಿಕ ಅವರನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಕಾಲೇಜಿನ ೯೯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಮಾರಂಭದಲ್ಲಿ ವಿತರಿಸಿ ಗೌರವಿಸಲಾಯಿತು. ಉಪನ್ಯಾಸಕಿ ತೀರ್ಥ ವರದಿ ವಾಚಿಸಿದರು. ಉಪನ್ಯಾಸಕರಾದ ಕವಿತಾ, ಕ್ರಿಸ್ಟಿನಾ, ಬಿ.ಎಂ. ಕೃಷ್ಣರಾಜ್, ವಿವೇಕ್, ಅಶ್ವಿನಿ, ರಮ್ಯ, ಮೊನಿಕಾ ಸೇರಿದಂತೆ ಎಲ್ಲಾ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.