ಶನಿವಾರಸAತೆ, ಜೂ. ೧೬: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಐತಿಹಾಸಿಕ ನಂದಿಪುರ ಕೆರೆ ಮತ್ತು ಉದ್ಯಾನದಲ್ಲಿ ಸ್ವಚ್ಛತಾ ಆಂದೋಲನ ನಡೆಸಲಾಯಿತು.
ಸ್ವಚ್ಛತಾ ಕಾರ್ಯದ ನಂತರ ಜಿಲ್ಲೆಯಲ್ಲೇ ಪ್ರಥಮ “ಎ” ಶ್ರೇಣಿಯ ಕೆರೆಯಾಗಿರುವ ನಂದಿಪುರ ಕೆರೆ ಮತ್ತು ಉದ್ಯಾನದ ರೂವಾರಿ ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಹಾಗೂ ಪತ್ನಿ ಅರುಣಾ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಚಂದ್ರಮೌಳಿ, ನಂದಿಪುರ ಕೆರೆ ಮತ್ತು ಉದ್ಯಾನ ಲೋಕಾರ್ಪಣೆಗೊಂಡು ವರ್ಷದ ನಂತರ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆದಿರುವುದು ಸಂತೋಷದ ಸಂಗತಿ. ಆಡಳಿತಾಧಿಕಾರಿ ಅವರು ಕಾಳಜಿ ವಹಿಸಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ. ರೂ.೪ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೆರೆಯನ್ನು ಸಂರಕ್ಷಿಸಿ ಉಳಿಸಿಕೊಂಡು ಹೋಗುವುದು ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಪ್ರಕೃತಿ ನಮ್ಮ ಜೊತೆ ಇದೆ. ನಾವು ಅದರ ಜೊತೆಯಾಗಿಲ್ಲ. ಅಶುಚಿತ್ವ ಪ್ರಕೃತಿಗೆ ಮಾರಕ. ಮುಂದೆ ಬರುವ ಜನಪ್ರತಿನಿಧಿಗಳು ಕೆರೆ-ಉದ್ಯಾನದ ಕುರಿತು ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸ್ವಚ್ಛತಾ ಆಂದೋಲನದ ನೇತೃತ್ವ ವಹಿಸಿದ್ದ ಸೋಮವಾರಪೇಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರನ್ನು ವಕೀಲರಾದ ಚಂದ್ರಮೌಳಿ ಸಾರ್ವಜನಿಕರ ಪರವಾಗಿ ಸನ್ಮಾನಿಸಿ ಗೌರವಿಸಿದರು. ನಂತರ ಪರಮೇಶ್ ಕುಮಾರ್ ಮಾತನಾಡಿ, ಶಾಸಕ ಡಾ.ಮಂತರ್ ಗೌಡರ ನಿರ್ದೇಶನದಂತೆ ತಾಲ್ಲೂಕಿನಾದ್ಯಂತ ಸ್ವಚ್ಛತೆ ಬಗ್ಗೆ ಗಮನ ಹರಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್, ಶ್ರೀನಿವಾಸ್, ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಪಿಡಿಒ ರಾಜೇಂದ್ರ, ಬ್ಯಾಡಗೊಟ್ಟ ಮತ್ತು ಶನಿವಾರಸಂತೆ ಗ್ರಾಮ ಪಂಚಾಯಿತಿ ಪಿಡಿಒ ಹರೀಶ್, ಬೆಸೂರು ಮತ್ತು ನಿಡ್ತ ಪಂಚಾಯಿತಿ ಪಿಡಿಒ ಮಾನಸ, ದುಂಡಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಆಯಿಷಾ, ಹಂಡ್ಲಿ ಗ್ರಾಮ ಪಂಚಾಯಿತಿ ಪಿಡಿಒ ಅಂಜನಾದೇವಿ, ಪ್ರಮುಖರಾದ ಅರುಣಾ ಚಂದ್ರಮೌಳಿ, ಬಿ.ಕೆ.ಯತೀಶ್, ಸಂಜೀವಿನಿ ಒಕ್ಕೂಟ ಮತ್ತು ಕರವೇ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಶ್ರಮದಾನ ಮಾಡಿದರು.