ಮಡಿಕೇರಿ ಜೂ. ೧೪: ಕೊಡಗು ಜಿಲ್ಲೆಯಲ್ಲಿ ಮಾರ್ಚ್ ೯ ರಿಂದ ಎಚ್.ಪಿ.ವಿ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗಿದ್ದು, ೫೨೭೬ ಗುರಿ ಪೈಕಿ ಜಿಲ್ಲೆಗೆ ೩೯೫೫ ಲಸಿಕೆ ಸರಬರಾಜಾಗಿದೆ. ಇದುವರೆಗು ೧೬೨೮ ಮಕ್ಕಳಿಗೆ ನೀಡಲಾಗಿದೆ. ಶೇ.೩೦.೮೫ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದ್ದಾರೆ.
ಎಚ್ಪಿವಿ ವೈರಸ್ ಹ್ಯೂಮನ್ ಪ್ಯಾಪಿಲೋಮ ವೈರಸ್ ಪ್ಯಾಪಿಲೋಮವಿರಿಡೆ ಎಂಬ ವೈರಸ್ ಜಾತಿಗೆ ಸೇರಿದ್ದು ಇದರಲ್ಲಿ ಒಟ್ಟು ೨೦೦ ಕ್ಕೂ ಹೆಚ್ಚು ಪ್ರಕಾರಗಳು ಇರುತ್ತದೆ. ಎಚ್ಪಿವಿ ೧೬ ಮತ್ತು ಎಚ್ಪಿವಿ ೧೮ ವೈರಸ್ ಇದು ಗರ್ಭಕಂಠದ ಕ್ಯಾನ್ಸರ್ಗೆ ಮೂಲ ಕಾರಣವಾಗಿರುತ್ತದೆ. ಇದನ್ನು ೨೦೩೦ ಒಳಗೆ ನಿರ್ಮೂಲನೆ ಮಾಡಲು ಜಾಗತಿಕ ಕಾರ್ಯಕ್ರಮ ರೂಪಿಸಲಾಗಿದೆ. ಇದು ಸುಮಾರು ೩೫ ವರ್ಷದಿಂದ ೪೫ ವರ್ಷದ ಒಳಗಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ಭಾರತದಲ್ಲಿ ಮಹಿಳೆಯರಲ್ಲಿ ಸಂಭವಿಸುವ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಪ್ರಮುಖ ಕ್ಯಾನ್ಸರ್ ಆಗಿರುತ್ತದೆ. ೨೦೨೨ ರಲ್ಲಿ ಒಟ್ಟು ೭೯,೧೦೩ ಹೊಸ ಪ್ರಕರಣಗಳು ಮತ್ತು ೩೪,೮೦೫ ಸಾವುಗಳು ಗರ್ಭಕಂಠದ ಕ್ಯಾನ್ಸರ್ನಿಂದ ಸಂಭವಿಸಿವೆ ಎಂದು ವರದಿಯಾಗಿದೆ.
ಎಚ್ಪಿವಿ ಲಸಿಕೆ ಜೀವಂತ ವೈರಸ್ ಲಸಿಕೆ ಅಲ್ಲ. ಇದು ಜೀವಂತವಲ್ಲದ, ಮರು ಸಂಯೋಜಿತ ಲಸಿಕೆ. ವೈರಸ್ ತರಹದ ಕಣಗಳನ್ನು (ವಿಎಲ್ಪಿ) ಒಳಗೊಂಡಿದ್ದು, ಎಚ್ಪಿವಿ ವೈರಸ್ನ ಹೊರ ಕವಚವನ್ನು ಹೋಲುವ ಅಸಾಂಕ್ರಾಮಿಕ ರಚನೆಗಳಿಂದ ತಯಾರಿಸಿರುವುದರಿಂದ ಈ ಲಸಿಕೆಯು ಎಚ್ಪಿವಿ ಸೋಂಕು ಉಂಟುಮಾಡಲು ಸಾಧ್ಯವಿಲ್ಲ.
೧೪ ವರ್ಷ ವಯಸ್ಸಿನ ಹುಡುಗಿಯರು (ತಮ್ಮ ೧೪ ನೇ ಹುಟ್ಟು ಹಬ್ಬ ಆಚರಿಸಿಕೊಂಡವರು ಆದರೆ ಇನ್ನೂ ೧೫ ನೇ ಹುಟ್ಟುಹಬ್ಬ ಆಚರಿಸದವರು) ಫಲಾನುಭವಿಗಳಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಡಿ.ಡಿ.ಪಿ.ಐ.ರವರು ತಮ್ಮ ವ್ಯಾಪ್ತಿಯ ಇಡೀ ಜಿಲ್ಲೆಯಲ್ಲಿ ಬರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಓದುತ್ತಿರುವ ಅರ್ಹ ಹೆಣ್ಣು ಮಕ್ಕಳ ಪಟ್ಟಿಯನ್ನು ಅವರ ಜನ್ಮ ದಿನಾಂಕದೊAದಿಗೆ ತಯಾರಿಸಿ ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳುವAತೆ ಸತೀಶ್ ಕುಮಾರ್ ತಿಳಿಸಿದ್ದಾರೆ.
ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ಕರೆದು ಈ ಎಚ್ಪಿವಿ ಲಸಿಕೆಯ ಬಗ್ಗೆ ಮಾಹಿತಿ ನೀಡಲಾಗುವುದು. ಪೋಷಕರು ನೀಡುವ ಮೊಬೈಲ್ ನಂಬರ್ಗೆ ಲಸಿಕೆಯ ನಂತರ ಒಟಿಪಿ ಬರುವುದರಿಂದ ಆ ಒಟಿಪಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿಯವರು ಕರೆ ಮಾಡಿದಾಗ ಒಟಿಪಿ ಹಂಚಿಕೊಳ್ಳಲು ಪೋಷಕರಿಗೆ ಮಾಹಿತಿ ನೀಡುವುದು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಅಡ್ಡ ಪರಿಣಾಮಗಳು ಒಂದು ವೇಳೆ ಸಂಭವಿಸಿದಲ್ಲಿ ಸಂಬAಧಪಟ್ಟ ಲಸಿಕಾ ಶಿಬಿರದ ವೈದ್ಯರು ಸೂಚಿಸಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಮಾಹಿತಿ ನೀಡಬೇಕಿದೆ.
ಶಾಲೆಯಿಂದ ಹೊರಗುಳಿದ ೧೪ ರಿಂದ ೧೫ ವರ್ಷದೊಳಗಿನ ಹೆಣ್ಣು ಮಕ್ಕಳ ಪಟ್ಟಿ ತಯಾರಿಸಿ ಅದನ್ನು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳ ಜೊತೆ ಹಂಚಿಕೊಳ್ಳುವುದು. ಗುರುತಿಸಿದ ೧೪ ರಿಂದ ೧೫ ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಉತ್ತೇಜನ ನೀಡಬೇಕಿದೆ.
ಹೆಚ್ಚಿನ ಮಕ್ಕಳು ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದು ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಿದ್ದಾರೆ. ಈ ಲಸಿಕೆಯ ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ಬಾರದ ರೀತಿ ತಡೆಯಲು ಸಾಧ್ಯವಾಗುತ್ತಿದ್ದು, ಸರ್ಕಾರ ಉಚಿತ ನೀಡುತ್ತಿರುವ ಲಸಿಕೆಯ ಪ್ರಯೋಜನ ಪಡೆಯಲು ಡಾ. ಸತೀಶ್ ಕುಮಾರ್ ಕೋರಿದ್ದಾರೆ.