ಇಂದು ವಿಶ್ವ ಗಾಳಿ ದಿನ

ಮನುಷ್ಯ ತಾಯಿಯ ಗರ್ಭದಿಂದ ಹೊರಬಂದ ಕ್ಷಣದಲ್ಲೇ ಮೊದಲು ಪಡೆಯುವುದು ಉಸಿರು ಮತ್ತು ಕೊನೆಯ ಕ್ಷಣದಲ್ಲಿ ಬಿಟ್ಟು ಹೋಗುವುದೂ ಸಹ ಅದೇ ಉಸಿರು. ಹಾಗಾಗಿ ನಮ್ಮ ಜೀವನದ ಆರಂಭದಿAದ ಜೀವನದ ಅಂತ್ಯದವರೆಗೆ ನಮ್ಮೊಂದಿಗೆ ಇರುವುದು ಉಸಿರಿನ ಮೂಲವಾದ ಗಾಳಿ. ಆದರೆ ಈ ಗಾಳಿ ಮಹತ್ವವನ್ನು ನಾವು ಬಹುಪಾಲು ಅರಿಯುವುದೇ ಇಲ್ಲ. ಉಚಿತವಾಗಿ ಸಿಗುತ್ತದೆ ಎಂಬ ಕಾರಣಕ್ಕೊ ಏನೋ ಅದರ ಮೌಲ್ಯವನ್ನೇ ಮರೆತುಬಿಡುತ್ತೇವೆ.

ಮಾನವನ ಬದುಕಿನಲ್ಲಿ ಹಣ, ಆಸ್ತಿ, ಅಧಿಕಾರ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಮುಖ್ಯವೇ ಸರಿ. ಆದರೆ ಇವೆಲ್ಲಕ್ಕಿಂತ ಮೊದಲು ಅವನಿಗೆ ಬೇಕಾಗಿರುವುದು ಉಸಿರಾಡಲು ಶುದ್ಧ ಗಾಳಿ. ಆಹಾರವಿಲ್ಲದೆ ಕೆಲವು ದಿನ ಬದುಕಬಹುದು ನೀರಿಲ್ಲದೆ ಕೆಲವು ಗಂಟೆಗಳು ಬದುಕಬಹುದು. ಆದರೆ ಗಾಳಿಯಿಲ್ಲದೆ ಕೆಲವೇ ನಿಮಿಷಗಳು ಸಹ ಬದುಕುವುದು ಅಸಾಧ್ಯ. ಆದ್ದರಿಂದಲೇ ಪ್ರಕೃತಿಯು ಮಾನವನಿಗೆ ಉಚಿತವಾಗಿ ನೀಡಿರುವ ಅತ್ಯಮೂಲ್ಯ ಸಂಪತ್ತೆAದರೆ ಅದು ಗಾಳಿಯಾಗಿದೆ.

ಈ ನಿಟ್ಟಿನಲ್ಲಿ ಗಾಳಿಯ ಮಹತ್ವವನ್ನು ಅರಿಯಲು ಪ್ರತಿವರ್ಷ ಜೂನ್ ೧೫ ರಂದು ಆಚರಿಸಲಾಗುವ ವಿಶ್ವ ಗಾಳಿ ದಿನವು ಶುದ್ಧ ಗಾಳಿಯ ಮಹತ್ವ, ಪರಿಸರ ಸಂರಕ್ಷಣೆ ಮತ್ತು ವಾಯು ಮಾಲಿನ್ಯದ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಮಾನವಕುಲದ ಅಸ್ತಿತ್ವಕ್ಕೆ ಸಂಬAಧಿಸಿದ ಎಚ್ಚರಿಕೆಯ ಘಂಟೆಯಾಗಿದೆ. ಜಗತ್ತಿನಾದ್ಯಂತ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಕೈಗಾರಿಕೀಕರಣ, ನಗರೀಕರಣ ಮತ್ತು ಆಧುನಿಕ ಜೀವನಶೈಲಿಯ ಪರಿಣಾಮವಾಗಿ ವಾಹನಗಳ ಹೊಗೆ, ಕಾರ್ಖಾನೆಗಳ ತ್ಯಾಜ್ಯ ಅನಿಲಗಳು, ಪ್ಲಾಸ್ಟಿಕ್ ದಹನ, ಅರಣ್ಯ ನಾಶ ಮತ್ತು ಅತಿಯಾದ ಇಂಧನ ಬಳಕೆಯಿಂದ ವಾತಾವರಣದಲ್ಲಿನ ಸಮತೋಲನ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಶುದ್ಧ ಗಾಳಿಯ ಅಗತ್ಯತೆ, ವಾಯು ಮಾಲಿನ್ಯದ ದುಷ್ಪರಿಣಾಮಗಳು ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯ ಕುರಿತು ಅರಿವು ಮೂಡಿಸಲು ವಿಶ್ವ ಗಾಳಿ ದಿನವನ್ನು ಆಚರಿಸಲಾಗುತ್ತಿದೆ. ಇದರ ಪ್ರಮುಖ ಉದ್ದೇಶಗಳೆಂದರೆ, ಶುದ್ಧ ಗಾಳಿಯ ಮಹತ್ವವನ್ನು ತಿಳಿಸುವುದು, ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವುದು, ಮರಗಳ ಸಂರಕ್ಷಣೆ ಮತ್ತು ಅರಣ್ಯ ವೃದ್ಧಿಗೆ ಪ್ರೋತ್ಸಾಹ ನೀಡುವುದು, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸುವುದು.

ಭೂಮಿಯ ಮೇಲಿನ ಪ್ರತಿ ಜೀವಿಯ ಜೀವದ ಮೂಲವಾದ ಗಾಳಿಯು ಕೇವಲ ಒಂದು ಪ್ರಕೃತಿ ಸಂಪನ್ಮೂಲವಲ್ಲ, ಅದು ಪ್ರತಿ ಜೀವಿಗಳ ಅಸ್ತಿತ್ವದ ಮೂಲಾಧಾರವಾಗಿದೆ. ಮನುಷ್ಯರು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಎಲ್ಲವೂ ಗಾಳಿಯ ಮೇಲೆ ಅವಲಂಬಿತವಾಗಿವೆ. ಮರಗಳು ಇಂಗಾಲದ ಡೈಆಕ್ಸೆöÊಡ್ ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಮೂಲಕ ಜೀವಜಗತ್ತಿನ ಉಳಿವಿಗೆ ಕಾರಣವಾಗುತ್ತವೆ. ಇನ್ನು ನಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಆಮ್ಲಜನಕದ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಗಾಳಿಯ ಗುಣಮಟ್ಟ ಕುಸಿದಾಗ ಅದರ ನೇರ ಪರಿಣಾಮ ಮಾನವನ ಆರೋಗ್ಯದ ಮೇಲೆ ಬೀಳುತ್ತದೆ. ಉಸಿರಾಟದ ತೊಂದರೆ, ಶ್ವಾಸಕೋಶದ ಕಾಯಿಲೆಗಳು, ಹೃದಯ ಸಂಬAಧಿ ಸಮಸ್ಯೆಗಳು ಮತ್ತು ಅನೇಕ ಆರೋಗ್ಯ ಸಮಸ್ಯೆಗಳು ವಾಯು ಮಾಲಿನ್ಯದ ಪರಿಣಾಮಗಳಾಗಿವೆ.

ಪ್ರಕೃತಿ ಮನುಷ್ಯನಿಗೆ ಬದುಕಲು ಕೊಟ್ಟ ವರವೆಂದರೆ ಅದು ಅಮೃತ ಸಮಾನವಾದ ಗಾಳಿ ಆದರೆ ಮೂರ್ಖರಾದ ನಾವು ಅದನ್ನೇ ವಿಷವಾಗಿಸಿಕೊಳ್ಳುತ್ತಿದ್ದೇವೆ. ಪ್ರಕೃತಿಯು ಶುದ್ಧ ಗಾಳಿ, ನಿರ್ಮಲ ನೀರು ಮತ್ತು ಸಮೃದ್ಧ ಪರಿಸರವನ್ನು ಕೊಟ್ಟಿದೆ. ಆದರೆ ತನ್ನ ಸ್ವಾರ್ಥ ಮತ್ತು ಅತಿಯಾದ ದುರಾಸೆಯಿಂದ ಮನುಷ್ಯನು ತನ್ನ ಬದುಕಿನ ಆಧಾರವಾದ ಗಾಳಿಯನ್ನೇ ಕಲುಷಿತಗೊಳಿಸುತ್ತ ಆಧುನಿಕತೆ ತಾಂತ್ರಿಕ ಮತ್ತು ಪ್ರಗತಿಯ ಹೆಸರಿನಲ್ಲಿ ತನ್ನ ಅಗತ್ಯಗಳನ್ನು ಮೀರಿ ದುರಾಸೆಯ ಹಾದಿಯಲ್ಲಿ ಸಾಗುತ್ತಿದ್ದಾನೆ. ಅರಣ್ಯಗಳನ್ನು ನಿರ್ದಯವಾಗಿ ನಾಶಪಡಿಸಿ, ಅವುಗಳ ಸ್ಥಳದಲ್ಲಿ ಬೃಹತ್ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಕೈಗಾರಿಕೆಗಳು ಮತ್ತು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಿದ್ದಾನೆ. ಪ್ರಕೃತಿಯ ಉಸಿರಾಗಿರುವ ಮರಗಳನ್ನು ಕಡಿದು ತನ್ನದೇ ಉಸಿರಿನ ಮೂಲವನ್ನು ದುರ್ಬಲಗೊಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇದಕ್ಕಿಂತ ಮೂರ್ಖತನ ಖಂಡಿತ ಇರಲಾರದು.

ಕೈಗಾರಿಕೆಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು ವಾತಾವರಣವನ್ನು ಸೇರುತ್ತಿದ್ದು, ಶುದ್ಧ ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಇದರ ಜೊತೆಗೆ ಮಿತಿ ಮೀರಿದ ವಾಹನಗಳ ಬಳಕೆಯಿಂದ ಹೊರಬರುವ ಹೊಗೆ, ಕಾರ್ಬನ್ ಉತ್ಸರ್ಜನೆ ಮತ್ತು ಸೂಕ್ಷö್ಮ ಮಾಲಿನ್ಯ ಕಣಗಳು ವಾಯುಮಂಡಲದ ಸಮತೋಲನವನ್ನು ಹಾಳು ಮಾಡುತ್ತಿವೆ. ಪರಿಣಾಮವಾಗಿ ಉಸಿರಾಟದ ತೊಂದರೆ, ಶ್ವಾಸಕೋಶದ ಕಾಯಿಲೆಗಳು, ಹೃದಯ ಸಂಬAಧಿ ಸಮಸ್ಯೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.

ಇನ್ನು ನಗರ ಪ್ರದೇಶಗಳಲ್ಲಿ ಒಳಚರಂಡಿ ಮತ್ತು ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಕಲುಷಿತ ನೀರು ಕೊಳೆತು ದುರ್ವಾಸನೆ ಉಂಟುಮಾಡುತ್ತಿದೆ. ಆ ದುರ್ವಾಸನೆ ಗಾಳಿಯಲ್ಲಿ ಬೆರೆತು ಪರಿಸರದ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸುತ್ತಿರುವುದರ ಜೊತೆ ರೋಗಗಳನ್ನು ಹರಡುತ್ತಿದೆ.

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರ ಸ್ವರೂಪವೆಂದು ಕಾಣಲಾಗಿದೆ. ಪಂಚಭೂತಗಳಲ್ಲಿ ವಾಯುವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಗಾಳಿ ಕೇವಲ ಭೌತಿಕ ಅಂಶವಲ್ಲ, ಅದು ಜೀವಶಕ್ತಿ ಎಂಬ ನಂಬಿಕೆ ನಮ್ಮ ಪರಂಪರೆಯಲ್ಲಿದೆ. ಯೋಗ, ಪ್ರಾಣಾಯಾಮ ಮತ್ತು ಧ್ಯಾನದಂತಹ ಭಾರತೀಯ ಪರಂಪರೆಗಳು ಉಸಿರಾಟದ ಮಹತ್ವವನ್ನು ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಪರಿಚಯಿಸಿವೆ. ಆದರೆ ಇಂದು ಆಧುನಿಕತೆಯ ಭರದಲ್ಲಿ ನಾವು ಪ್ರಕೃತಿಯೊಂದಿಗಿನ ನಮ್ಮ ಸಂಬAಧವನ್ನು ಮರೆತಿದ್ದೇವೆ. ಪ್ರಕೃತಿಯನ್ನು ಪೂಜಿಸುವ ಸಂಸ್ಕೃತಿ ಉಳಿದರೆ ಮಾತ್ರ ಪರಿಸರ ಉಳಿಯುತ್ತದೆ. ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರುತ್ತದೆ.

ಯುವಜನರ ಪಾತ್ರ

ವಿಶ್ವ ಗಾಳಿ ದಿನದ ಸಂದೇಶವನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಯುವಜನರ ಮೇಲಿದೆ. ಪರಿಸರ ಸಂರಕ್ಷಣೆ ಸರ್ಕಾರಗಳ ಕರ್ತವ್ಯ ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಅನಗತ್ಯ ವಾಹನ ಬಳಕೆಯನ್ನು ಕಡಿಮೆ ಮಾಡಬೇಕು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕುವುದು ಮತ್ತು ಕಸವನ್ನು ಸುಡುವುದನ್ನು ನಿಲ್ಲಿಸಬೇಕು, ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ.

ವಿಶ್ವ ಗಾಳಿ ದಿನವು ಕೇವಲ ಒಂದು ದಿನದ ಆಚರಣೆಯಲ್ಲ, ಇದು ಮಾನವಕುಲಕ್ಕೆ ಪ್ರಕೃತಿಯ ಕೊನೆಯ ಎಚ್ಚರಿಕೆಯ ಸಂದೇಶವಾಗಿದೆ. ನಾವು ಇಂದು ಗಾಳಿಯನ್ನು ಕಲುಷಿತಗೊಳಿಸಿದರೆ, ನಾಳೆ ನಮ್ಮ ಮತ್ತು ನಮ್ಮ ಮಕ್ಕಳ ಉಸಿರನ್ನೇ ಕಸಿದುಕೊಂಡAತಾಗುತ್ತದೆ. ಪ್ರಕೃತಿಯು ನಮಗೆ ಶುದ್ಧ ಗಾಳಿಯನ್ನು ಕೊಟ್ಟಿದೆ. ಅದನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ಅಭಿವೃದ್ಧಿ ಬೇಕು. ಆದರೆ ಅದು ಪ್ರಕೃತಿಯ ವಿನಾಶದ ಮೇಲೆ ನಿರ್ಮಾಣವಾಗಬಾರದು.

ಗಾಳಿಯನ್ನು ಉಳಿಸುವುದು ಎಂದರೆ ಜೀವವನ್ನು ಉಳಿಸುವುದು, ಪರಿಸರವನ್ನು ಕಾಪಾಡುವುದು ಎಂದರೆ ಭವಿಷ್ಯವನ್ನು ಕಾಪಾಡುವುದು' ಎಂಬ ಅರಿವಿರಬೇಕು

- ಗೀತಾಂಜಲಿ ಎನ್.ಎಮ್., ಸೋಮವಾರಪೇಟೆ.