ಸಿದ್ದಾಪುರ, ಜೂ.೧೪: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಸಿದ್ದಾಪುರದ ಸಿಪಿಐಎಂ ಪಕ್ಷದ ವತಿಯಿಂದ ಸದ್ಯದಲ್ಲೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಹಿರಿಯ ಕಾರ್ಮಿಕ ಮುಖಂಡ ಎನ್ ಡಿ.ಕುಟ್ಟಪ್ಪನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಒಳಪಡುತ್ತಿದ್ದು ಈ ಆಸ್ಪತ್ರೆಗೆ ಬಡ ವರ್ಗದವರು ಮತ್ತು ಕೂಲಿಕಾರ್ಮಿಕರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರುಗಳ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಇಲ್ಲವಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕುಟ್ಟಪ್ಪನ್ ಆರೋಪಿಸಿದರು. ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ಸಮರ್ಪಕವಾಗಿ ಔಷಧಿಗಳನ್ನು ವಿತರಣೆ ಮಾಡುತ್ತಿಲ್ಲ ಎಂದು ದೂರಿದ ಅವರು, ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಸ್ರೀ ತಜ್ಞ ವೈದ್ಯರು ಇಲ್ಲದೆ ಮಹಿಳೆಯರಿಗೆ ಸಮಸ್ಯೆ ಎದುರಾಗಿದೆ ಎಂದರು.

ಸಿ.ಪಿ.ಐ.ಎಂ ಪಕ್ಷದ ಗ್ರಾಮ ಸಮಿತಿಯ ಕಾರ್ಯದರ್ಶಿ ಬೈಜು ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ವಾಹನ ಇದ್ದರೂ ಕೂಡ ಚಾಲಕ ಸಮರ್ಪಕವಾಗಿ ದೊರಕದೆ ಖಾಸಗಿ ವಾಹನದಲ್ಲಿ ರೋಗಿಗಳನ್ನು ದೂರದ ಊರಿಗೆ ರವಾನಿಸುವಂತಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಕ್ಸ್ರೇ ಇನ್ನಿತರ ಯಂತ್ರಗಳು ಇದ್ದರೂ ಕೂಡ ಅದನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಇದೆ ಎಂದು ತಿಳಿಸಿದರು.

ಈ ಬಗ್ಗೆ ಕ್ಷೇತ್ರದ ಶಾಸಕರು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರುಗಳು ಸಿಬ್ಬಂದಿ ಇಲ್ಲದೆ ಚಿಕಿತ್ಸೆಗಾಗಿ ದೂರದ ಊರಿಗೆ ತೆರಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಸಿ.ಪಿ ಐ .ಎಂ. ಪಕ್ಷದ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್, ಮರ್ಕರ್ ಹಾಜರಿದ್ದರು.