ಕುಶಾಲನಗರ, ಜೂ.೧೪: ಕುಶಾಲನಗರ ಸಮೀಪದ ಮಾದಾಪಟ್ಟಣ ಅಂಗನವಾಡಿ ಕೇಂದ್ರ-೧ ಕ್ಕೆ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸದೆ ಸ್ಥಳೀಯ ಮಕ್ಕಳಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷತೆ ಖಂಡಿಸಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಾಮೋದರ್ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರದ ಮುಂದೆ ಪೋಷಕರು ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕಾದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಾತ್ಸಾರ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಬೀಗ ಜಡಿದ ಸ್ಥಿತಿಯಲ್ಲಿಯೇ ಇದೆ. ಮಕ್ಕಳ ಭವಿಷ್ಯ ಗಮನಿಸಿ ಕಳೆದೆರಡು ತಿಂಗಳ ಹಿಂದೆ ಅಂಗನವಾಡಿ ಬಾಗಿಲು ತೆರೆಸಿ ಮಕ್ಕಳ ಕಲಿಕೆಗೆ ಅವಕಾಶ ಒದಗಿಸಿಕೊಡಲಾಗಿತ್ತು. ಗ್ರಾಮ ಪಂಚಾಯತಿ ಮೂಲಕ ಅಂಗನವಾಡಿಯ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ಕೂಡ ದೊರೆತಿತ್ತು. ಆದರೆ ಶಿಕ್ಷಕರೇ ಇಲ್ಲದ ಕಾರಣ ಅಂಗನವಾಡಿಗೆ ಬೀಗ ಜಡಿಯುವ ಪರಿಸ್ಥಿತಿ ಎದುರಾಗಿದೆ. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಾವುದೇ ಅಗತ್ಯ ಕ್ರಮಕೈಗೊಳ್ಳದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭ ಸ್ಥಳೀಯ ಮಕ್ಕಳ ಪೋಷಕರಾದ ಸಾಕಮ್ಮ, ಮೀನಾ, ಭಾಗ್ಯ, ಖೈರುನ್ನಿಸಾ, ಕಾವ್ಯ, ರೀತಾ, ಗೌರಿ, ಅಮೀನಾ, ದೇವರಾಜ್, ಚಂದ್ರ ನಾಗಮ್ಮ ಮತ್ತಿತರರು ಇದ್ದರು.