ಸೋಮವಾರಪೇಟೆ, ಜೂ. ೧೪: ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತಗೊಳ್ಳಬಾರದು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಸಮಾಜ ಗಮನ ಹರಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಹೇಳಿದರು.

ಸಮೀಪದ ಶಾಂತಳ್ಳಿ-ಬೆಟ್ಟದಳ್ಳಿಯಲ್ಲಿರುವ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಾಲೆಯ ೧೮೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಆಂಗ್ಲ ಮಾಧ್ಯಮದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಂತಳ್ಳಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಮೂಲಕ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಲಾಗಿದೆ. ಗ್ರಾಮಾಂತರ ಪ್ರದೇಶ, ಅದರಲ್ಲೂ ಕುಗ್ರಾಮಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಸ್ಥಳೀಯವಾಗಿಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ. ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರವೀಂದ್ರ ಅವರು ತಿಳಿಸಿದರು.

ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ಕೆ. ಗೋಪಾಲ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಪೋಷಕರು ಸಹ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕು. ಮನೆಯಲ್ಲಿಯೂ ಪಾಠ ಪ್ರವಚನದ ಬಗ್ಗೆ ನೋಡಿಕೊಳ್ಳಬೇಕು. ಪೋಷಕರು ಆಗಾಗ್ಗೆ ಶಾಲೆಗೆ ಭೇಟಿ ನೀಡಬೇಕು. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹರಪಳ್ಳಿ ರವೀಂದ್ರ ಅವರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವ್ಯಯಿಸಿ ನೂರಾರು ಶಾಲೆಗಳ ಮಕ್ಕಳಿಗೆ ಪುಸ್ತಕವನ್ನು ನೀಡುತ್ತಿರುವುದು ಶ್ಲಾಘನಾರ್ಹ ಎಂದರು. ಇದೇ ಸಂದರ್ಭ ಶಾಲೆಗೆ ನೂತನ ಬಸ್ ವ್ಯವಸ್ಥೆಗೆ ಸಹಕಾರ ನೀಡಿದ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದ ಹರಪಳ್ಳಿ ರವೀಂದ್ರ ಅವರನ್ನು ಶಾಲಾಡಳಿತ ಮಂಡಳಿಯಿAದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಕಾರ್ಯಪ್ಪ, ಬಾತ್ಮೀದಾರ ಕುಮಾರಳ್ಳಿ ಪ್ರದೀಪ್, ನಿರ್ದೇಶಕ ಗುಡ್ಡಳ್ಳಿ ಮಧು, ರಾಜೇಶ್, ಕುಡಿಗಾಣ ಸುಧಿನ್, ತಲ್ತರೆಶೆಟ್ಟಳ್ಳಿ ಸುಖಾಂತ್ ಬಸವರಾಜು, ಕಾವೇರಮ್ಮ, ಗಂಧರ್ವ, ಬೆಟ್ಟದಳ್ಳಿ ಆದರ್ಶ್ ಸೇರಿದಂತೆ ಇತರರು ಇದ್ದರು. ಮುಖ್ಯಶಿಕ್ಷಕಿ ಲೀಲಾವತಿ, ಸಹ ಶಿಕ್ಷಕರಾದ ಭವ್ಯ, ಶ್ವೇತಾ, ಸುಜಾತಾ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.