ಸೋಮವಾರಪೇಟೆ, ಜೂ. ೧೩: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ, ೯೪ ಸಿ. ಅಡಿಯಲ್ಲಿ ಲಭ್ಯವಾಗದ ಹಕ್ಕುಪತ್ರ, ಸೆಕ್ಷನ್ ೪ ಹೆಸರಿನಲ್ಲಿ ರೈತರಿಗೆ ನೋಟಿಸ್, ಕಾಫಿ ತೋಟವನ್ನು ಕಡಿದು ಪರಿಹಾರ ನೀಡದ ಅರಣ್ಯ ಇಲಾಖೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ತಾ. ೧೬ ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಮುಂದೂಡಲಾಗಿದೆ.
ಸಿ ಮತ್ತು ಡಿ ಜಾಗದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ರಚಿಸಿರುವ ವಿಶೇಷ ಸಮಿತಿಯು ೨ ತಿಂಗಳ ಕಾಲಾವಕಾಶ ಕೋರಿದ್ದು, ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯೂ ಇರುವುದರಿಂದ ತಾ. ೧೬ ರಂದು ನಿರ್ಧರಿಸಿದ್ದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಧರಣಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯವರು ಅಂತಿಮ ವರದಿ ಸಲ್ಲಿಸಲು ೨ ತಿಂಗಳ ಕಾಲ ಕಾಲಾವಕಾಶ ಕೋರಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಅರಣ್ಯ ಇಲಾಖಾ ಸಚಿವರ ನೇಮಕವೂ ಆಗಿಲ್ಲ. ಈ ಕಾರಣದಿಂದ ಪ್ರತಿಭಟನೆಯನ್ನು ಮುಂದೂಡಲಾಗಿದೆ. ೨ ತಿಂಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಪ್ರಮುಖವಾಗಿ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ರೈತರು ಗಿಡಮರಗಳನ್ನು ನೆಟ್ಟು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಜಾಗವನ್ನು ಇದೀಗ ಅರಣ್ಯಕ್ಕೆ ಸೇರಿಸಲು ಹುನ್ನಾರ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ವತಿಯಿಂದ ನಡೆಸುತ್ತಿರುವ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಸರ್ಕಾರ ನೇಮಕ ಮಾಡಿರುವ ವಿಶೇಷ ಸಮಿತಿಯ ವರದಿ ಬರುವವರೆಗೂ ಕಾಯಬೇಕು. ಒಂದು ವೇಳೆ ಬಲವಂತವಾಗಿ ಸರ್ವೆ ನಡೆಸಲು ಮುಂದಾದರೆ ರೈತರಿಂದ ತಕ್ಕ ಪ್ರತಿರೋಧ ವ್ಯಕ್ತವಾಗಲಿದೆ ಎಂದು ಎಚ್ಚರಿಸಿದರು.
ಇದರೊಂದಿಗೆ ಅರಣ್ಯ ಇಲಾಖೆಯವರು ಸೆಕ್ಷನ್ ೪ ಹೆಸರಿನಲ್ಲಿ ರೈತರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಇದು ಮುಂದುವರೆದರೆ ರೈತರೇ ಕಾನೂನು ಕೈಗೆತ್ತಿಕೊಳ್ಳಲಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗುತ್ತದೆ. ಸಿ ಮತ್ತು ಡಿ ಸಮಸ್ಯೆ ರಾಜ್ಯ ಸರ್ಕಾರದ ವ್ಯಾಪ್ತಿಗೆ, ಸೆಕ್ಷನ್ ೪ ಸಮಸ್ಯೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಎರಡೂ ಸರ್ಕಾರಗಳ ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸುರೇಶ್ ಚಕ್ರವರ್ತಿ ಆಗ್ರಹಿಸಿದರು.
ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರಿಗೆ ಸೇರಿದ ಕಾಫಿ, ಏಲಕ್ಕಿ ತೋಟವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಕಡಿದು ನಾಶಗೊಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾಣಿಯಪ್ಪ ಅವರಿಗೆ ಈವರೆಗೆ ಪರಿಹಾರವನ್ನೂ ಒದಗಿಸಿಲ್ಲ. ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರೈತ ಸಂಘದ ತಾಲೂಕು ಅಧ್ಯಕ್ಷ ಕೂತಿ ದಿನೇಶ್ ಮಾತನಾಡಿ, ಕಾಜೂರು ಅರಣ್ಯದಲ್ಲಿ ೫೦ಕ್ಕೂ ಅಧಿಕ ತೇಗದ ಮರಗಳನ್ನು ಅರಣ್ಯ ಇಲಾಖೆಯ ಮೂಗಿನಡಿಯಲ್ಲಿಯೇ ಕಡಿದು ಸಾಗಿಸಲಾಗಿದೆ. ಇದರಲ್ಲಿ ಇಲಾಖೆಯವರ ಕೈವಾಡವೂ ಇದ್ದು, ವಿಶೇಷ ತನಿಖಾ ಸಮಿತಿ ತನಿಖೆ ಮಾಡುವ ಹಂತದಲ್ಲಿಯೇ ಹಲವಷ್ಟು ಅಧಿಕಾರಿಗಳ ವರ್ಗಾವಣೆಯಾಗಿದೆ. ಇದು ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಎಂದು ಆರೋಪಿಸಿದರು.
ಬಡ ರೈತರು ತಮ್ಮ ಜಾಗದಲ್ಲಿ ತಾವೇ ಬೆಳೆದ ಮರವನ್ನು ಕಡಿದರೆ ಮೊಕದ್ದಮೆ ದಾಖಲಿಸಿ ಜೈಲಿಗಟ್ಟುವ ಅರಣ್ಯಾಧಿಕಾರಿಗಳು, ತಮ್ಮ ಕಣ್ಣೆದುರೇ ತೇಗದ ಮರಗಳು ಕಳ್ಳತನವಾಗಿದ್ದರೂ, ಯಾವುದೇ ಕ್ರಮ ವಹಿಸಿಲ್ಲ. ಇದರ ವಿರುದ್ಧವೂ ರೈತ ಸಂಘ ಹೋರಾಟ ನಡೆಸಲಿದೆ ಎಂದರು.
ಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್, ನಿರ್ದೇಶಕ ಹೆಚ್.ಕೆ. ಪ್ರಸಿ, ಬಿ.ಎಂ. ಸುರೇಶ್ ಅವರುಗಳು ಇದ್ದರು.