ಬೆಂಗಳೂರು, ಜೂ.೧೩: ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ಗೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲೇಬೇಕೆಂದು ಪಣತೊಟ್ಟು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತಿತರರು ಷಡ್ಯಂತ್ರ ಮಾಡಿದ್ದಾರೆ ಎಂದು 'ಮಾಸ್ಕ್ ಮ್ಯಾನ್' ಎಂದೇ ಕುಖ್ಯಾತಿ ಪಡೆದಿದ್ದ ಸಿ.ಎನ್.ಚಿನ್ನ (ಚಿನ್ನಯ್ಯ) ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಡೀ ಘಟನೆಯ ವಿವರವನ್ನು ವಿಷದವಾಗಿ ಬಿಚ್ಚಿಟ್ಟಿದ್ದಾರೆ.

ಪ್ರಕರಣದ ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಅತ್ಯಂತ ಶೀಘ್ರವಾಗಿ ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ಗೆ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಮಹತ್ವದ ಅಂಶ ಗಳನ್ನು ಉಲ್ಲೇಖಿಸಿದ್ದಾರೆ. ಈ ಷಡ್ಯಂತ್ರದಲ್ಲಿ ಅವರು ವಿಠಲ್ ಗೌಡ, ಜಯಂತ್, ಕುಡ್ಲ ರಾಮ್ ಪೇಜ್‌ನ ಅಜಯ್ ಅಂಚನ್, ಯೂಟ್ಯೂಬರ್ ಸಮೀರ್‌ಎಂ.ಡಿ. ಹೆಸರನ್ನೂ ಉಲ್ಲೇಖಿಸಿದ್ದಾರೆ.

ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾ ರದ ಗೃಹ ಇಲಾಖೆ, ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ, ಎಸ್‌ಐಟಿ ಮತ್ತು ಧರ್ಮಸ್ಥಳ ಠಾಣಾ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ತನಿಖೆಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ಎಸ್ ಐಟಿಗೆ ನಿರ್ದೇಶಿಸಿದೆ.

೨೦೦ ಕೋಟಿ ರೂ.ಬಜೆಟ್

ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಡಿದ ಷಡ್ಯಂತ್ರ ಯೋಜನೆಯ ಒಟ್ಟು ಬಜೆಟ್ ಸುಮಾರು ೨೦೦ ಕೋಟಿ ರೂ. ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ನನಗೆ ೫೦ ಲಕ್ಷ ರೂ. ನೀಡುವುದಾಗಿ ಮಹೇಶ್ ಶೆಟ್ಟಿ ತಿಮರೋಡಿ ಭರವಸೆ ನೀಡಿದ್ದರು. ಜೀವ ಬೆದರಿಕೆ ಹಾಕಿ, ಬಲವಂತವಾಗಿ ನನ್ನಿಂದ ಹೇಳಿಕೆ ಕೊಡಿಸಿದರು ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಜೊತೆಗೆ ಪ್ರಕಾಶ್ ರಾಜ್ ಎಂಬುವವರು ಸಹ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ಒಂದು ದಿನ ಬಂದು ಭೇಟಿ ಮಾಡಿ ಅಪ್ಪಿಕೊಳ್ಳುವುದಾಗಿ ಹೇಳಿದ್ದರು. ಷಡ್ಯಂತ್ರದ ಸಮಗ್ರ ವಿವರ ಹಾಗೂ ಪಿತೂರಿದಾರರ ಹೆಸರುಗಳನ್ನು ನಾನು ತಿಳಿಸಿದ್ದರೂ ಎಸ್‌ಐಟಿ ಮಾತ್ರ ಅಂತಿಮ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವುದು ಅನುಮಾನ ಉಂಟು ಮಾಡುತ್ತಿದೆ. ಆದ್ದರಿಂದ ಈ ಷಡ್ಯಂತ್ರ ಸಂಬAಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರುವ ಪ್ರಕರಣದ (ಅಪರಾಧ ಸಂಖ್ಯೆ : ೩೯/೨೦೨೫) ತನಿಖೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಅತ್ಯಂತ ಶೀಘ್ರದಲ್ಲಿ ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ದ ಕ್ರಮ ಕೈಗೊಳ್ಳಲು ಎಸ್ ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಚಿನ್ನಯ್ಯ ಅರ್ಜಿಯಲ್ಲಿ ಕೋರಿದ್ದಾರೆ.

ಪೊಲೀಸರಿಗೆ ನಿರ್ದೇಶನ ನೀಡಲೂ ಮನವಿ

ಅಲ್ಲದೆ ಪ್ರಕರಣದ ಒಳಸಂಚು, ತನಗೆ ನೀಡಲಾದ ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಬೆದರಿಕೆ ಬಗ್ಗೆ ೨೦೨೫ರ ಡಿಸೆಂಬರ್ ೧೮ರಂದು ನೀಡಲಾದ ದೂರಿಗೆ ಸಂಬAಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಧರ್ಮಸ್ಥಳ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಚಿನ್ನಯ್ಯ ಮನವಿ ಮಾಡಿದ್ದಾರೆ.

ಚಿನ್ನಯ್ಯ ತನ್ನ ಅರ್ಜಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪಿತೂರಿದಾರರು ನಡೆಸಿದ ಷಡ್ಯಂತ್ರದ ಭಾಗವಾಗಿ ೨೦೨೩-೨೪ನೇ ಸಾಲಿನಲ್ಲಿ ಉಜಿರೆ ಗ್ರಾಪಂನಲ್ಲಿ ಉದ್ಯೋಗ ಮಾಡುತ್ತಿದ್ದ ತನ್ನ ಬಳಿ ಸೌಜನ್ಯ ಫೋಟೋ ಹಿಡಿದು ಬಂದ ವಿಠಲಗೌಡ, ತಿಮರೋಡಿ ಅವರಲ್ಲಿಗೆ ಕರೆದುಕೊಂಡು ಹೋದ ದಿನದಿಂದ ೨೦೨೫ರಲ್ಲಿ ತಾನು ಜೈಲುಪಾಲು ಆಗುವವರೆಗಿನ ನಡೆದ ಎಲ್ಲಾ ಘಟನೆಗಳನ್ನು ಅರ್ಜಿಯಲ್ಲಿ ವಿವರಿಸಿದ್ದಾರೆ. ಜೊತೆಗೆ, ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಧಕ್ಕೆ ತರಲು ಷಡ್ಯಂತ್ರದಾರರಿಗೆ ಕೇರಳದಿಂದ ಹಣ ಬರುತ್ತಿತ್ತು. ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರು ನಿಯಮಿತವಾಗಿ ಫಂಡಿAಗ್ ಮಾಡುತ್ತಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.