ಕುಶಾಲನಗರ, ಜೂ. ೧೩: ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಇನ್ನೋರ್ವ ಯುವಕನ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ.

ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದ ನದಿಯಲ್ಲಿ ಯಾಂಗ್ ಕಾಂಗ್ (೨೫) ಮೃತದೇಹವನ್ನು ಪತ್ತೆ ಮಾಡುವಲ್ಲಿ ಕುಶಾಲನಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಬುಧವಾರ ಕುಶಾಲನಗರ - ಕೊಪ್ಪ ಗಡಿಭಾಗದ ಸೇತುವೆಯ ಕೆಳಭಾಗದಲ್ಲಿ ಈಜಲು ತೆರಳಿದ್ದ ನಾಗಾಲ್ಯಾಂಡ್ ಮೂಲದ ಇಬ್ಬರು ಯುವಕರು ನೀರು ಪಾಲಾಗಿದ್ದರು.

ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಯುವಕರು ಮತ್ತು ಓರ್ವ ಯುವತಿ ಸೇರಿ ಮೂರು ಜನ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿತ್ತು. ಇಬ್ಬರು ಯುವಕರು ನದಿಗೆ ಇಳಿದ ಸಂದರ್ಭ ಯುವತಿ ನದಿ ತಟದಲ್ಲಿ ಇದ್ದ ಕಾರಣ ಅನಾಹುತದಿಂದ ಪಾರಾಗಿದ್ದಾಳೆ. ಆಕೆ ಈ ದುರ್ಘಟನೆಯನ್ನು ಕಣ್ಣಾರೆ ಕಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ಯುವಕ ಬೆಸಸುಕುಂ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿತ್ತು. ಮೃತ ಯುವಕರ ಸ್ನೇಹಿತರು ಬೆಂಗಳೂರಿನಿAದ ಆಗಮಿಸಿದ್ದು ಮೃತ ದೇಹಗಳ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮರಣೋತ್ತರ ಪರೀಕ್ಷೆ ನಡೆದು ಅಂತ್ಯಸAಸ್ಕಾರ ಕುಶಾಲನಗರದಲ್ಲಿ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಶಾಲನಗರ ಅಗ್ನಿಶಾಮಕ ತಂಡ ಮತ್ತು ಸ್ಥಳೀಯ ಸಮಾಜ ಸೇವಕ ಮುನೀರ್ ಮತ್ತು ಹೊಟೇಲ್ ಮಾಲೀಕರು ಕಳೆದ ನಾಲ್ಕು ದಿನಗಳಿಂದ ಮೃತದೇಹಗಳ ಪತ್ತೆಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದರು.