ಮಡಿಕೇರಿ, ಜೂ. ೮: ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕೊಡಗನ್ನು ಆಳಿದ ಹಾಲೇರಿ ಅರಸ, ಸ್ವಾತಂತ್ರö್ಯ ಹೋರಾಟಗಾರ ಹೆಮ್ಮನೆ ಶ್ರೀ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಅವರ ಸಂಸ್ಮರಣೋತ್ಸವ ಕಾರ್ಯಕ್ರಮ ತಾ. ೧೩ ರಂದು ನಡೆಯಲಿದೆ ಎಂದು ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೩ ರಂದು ಶನಿವಾರಸಂತೆಯ ಗುಡುಗಳಲೆ ಜಯದೇವ ಜಾತ್ರ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೮ ಗಂಟೆಗೆ ಮಧ್ಯಪೇಟೆ ವಿಘ್ನೇಶ್ವರ ದೇವಾಲಯದಿಂದ ಗುಡುಗಳಲೆ ಜಾತ್ರ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಲಿದ್ದು, ಬೆಳಿಗ್ಗೆ ೧೦.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಯದುವೀರ್ ಒಡೆಯರ್ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಮಡಿಕೇರಿ ಶಾಸಕ ಮಂತರ್ ಗೌಡ ಅವರು ಸ್ವಾತಂತ್ರö್ಯ ಹೋರಾಟಗಾರ ಹೆಮ್ಮನೆ ಪುಟ್ಟಬಸಪ್ಪ ಅವರ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಅಧ್ಯಕ್ಷ ವೆಂಕಟ್ ರೆಡ್ಡಿ ಪಾಟೀಲ್, ಹಿರಿಯ ನ್ಯಾಯವಾದಿ ಹೆಚ್.ಎಸ್. ಚಂದ್ರಮೌಳಿ, ಮಾಹಿತಿ ಹಕ್ಕು ವಿಭಾಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಮೋಕ್ಷಿಕ್ ರಾಜ್, ಮಾಜಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಸಂಘಟನೆಯ ಪ್ರಮುಖರು, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಮುದ್ದಿನ ಕಟ್ಟೆ ಮಠದ ಶ್ರೀಗಳಾದ ಸಿದ್ದವೀರ ಶಿವಚಾರ್ಯ ಮಹಾಸ್ವಾಮಿ, ಪದ್ಮಶ್ರೀ ಪುರಸ್ಕೃತರಾದ ಡಾ. ಎಸ್.ಜಿ. ಸುಶೀಲಮ್ಮ, ಶೌರ್ಯ ಪುರಸ್ಕೃತ ಸೈನಿಕರಾದ ಸಂತೋಷ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮಹಾಸಭಾದ ಯುವಘಟಕದ ಜಿಲ್ಲಾಧ್ಯಕ್ಷ ಮೋಕ್ಷಿಕ್ ರಾಜ್, ಖಜಾಂಚಿ ಸಿ.ಸಿ. ಭರತ್, ಕಾರ್ಯದರ್ಶಿ ಸಿ.ಎಂ. ಸೋಹನ್, ಉಪಾಧ್ಯಕ್ಷ ಸುರೇಶ್ ಮಾಯಮುಡಿ ಹಾಜರಿದ್ದರು.