ಪೊನ್ನಂಪೇಟೆ ಜೂನಿಯರ್ ಕಾಲೇಜು ಆವರಣ

ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪೊನ್ನಂಪೇಟೆ ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್. ಕರ್ನಾಟಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಜೂನಿಯರ್ ಕಾಲೇಜು ಆವರಣದಲ್ಲಿ ವಿಶೇಷ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದ ಎ.ಎಸ್. ಪೊನ್ನಣ್ಣ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ಕೊಡಗಿನ ಸೌಂದರ್ಯವನ್ನು ಉಳಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ಪರಿಸರ ದಿನಾಚರಣೆ ಸಡಗರದಿಂದ ನಡೆಯಿತು. ಜೂನಿಯರ್ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಪರಿಸರ ಮಾಲಿನ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಪ್ರಕೃತಿಯನ್ನು ಕೇವಲ ಒಂದು ದಿನ ಪೂಜಿಸುವುದಲ್ಲ, ದೈನಂದಿನ ಜೀವನದಲ್ಲಿ ಪರಿಸರವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಹಾಗೂ ಪ್ರಮುಖರಾದ ಆಲೀರ ಎರಮು ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪರಿಸರ ಸಂರಕ್ಷಣೆಯ ಸಂಕಲ್ಪತೊಟ್ಟರು. ಒಟ್ಟಿನಲ್ಲಿ, ಪ್ರಕೃತಿಯ ಮಡಿಲಾದ ಕೊಡಗಿನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ಸಾರ್ವಜನಿಕರಲ್ಲಿ

ಹಸಿರಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಕಲ್ಲುಮಠದ ಎಸ್.ಕೆ.ಎಸ್. ಶಾಲೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಕಲ್ಲುಮಠದ ಎಸ್.ಕೆ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಪರಿಸರ ದಿನವನ್ನು "ಪ್ರಕೃತಿಯಿಂದ ಪ್ರೇರಿತ ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ" ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಂದಿದ್ದ ವಿವಿಧ ಬಗೆಯ ಹೂಗಿಡಗಳು, ಹಣ್ಣಿನ ಗಿಡಗಳನ್ನು ಶಾಲಾ ಆವರಣದಲ್ಲಿ ನೆಟ್ಟರು.

ಶನಿವಾರಸಂತೆ ವಲಯ ಅರಣ್ಯ ಇಲಾಖೆ ವತಿಯಿಂದಲೂ ಶಾಲೆಗೆ ವಿವಿಧ ಬಗೆಯ ಗಿಡಗಳನ್ನು ವಿತರಿಸಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಕಲ್ಲುಮಠದ ಮಹಾಂತ ಸ್ವಾಮೀಜಿಯವರ ಸಮ್ಮುಖದಲ್ಲಿ ಅರಣ್ಯ ವಲಯಾಧಿಕಾರಿ ವಿಶ್ವನಾಥ್, ಗಸ್ತು ಅರಣ್ಯಾಧಿಕಾರಿ ಎ.ಎನ್. ಪುನೀತ್, ಸಿಬ್ಬಂದಿ ರಮೇಶ್, ಲೋಕೇಶ್, ಶೇಖರ್, ನೂತನ್, ಅವಿನಾಶ್ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯಶಿಕ್ಷಕ ಹೆಚ್.ಎಂ. ಅಭಿಲಾಶ್, ದೈಹಿಕ ಶಿಕ್ಷಣ ಶಿಕ್ಷಕ ಪುನೀತ್, ಸಹಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.

ವಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ವಿ. ಬಾಡಗ: ವಿಶ್ವ ಪರಿಸರ ದಿನಾಚರಣೆಯನ್ನು ವಿ. ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಗಿಡ ನಡೆಸುವುದರ ಮೂಲಕ ಆಚರಿಸಲಾಯಿತು. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನು ನೆಟ್ಟು ಪೋಷಿಸುವಂತೆ ಕಳೆದ ವರ್ಷದಿಂದ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ಮುಂದುವರಿಸುವAತೆ ಮಾರ್ಗದರ್ಶನ ನೀಡಲಾಯಿತು.

ಈ ಸಂದರ್ಭ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಸಿ. ಗೀತಾಂಜಲಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಲ್ಯಾಂಪ್ಸ್ ಅಕಾಡೆಮಿ ತಿತಿಮತಿ

ತಿತಿಮತಿ: ಲ್ಯಾಂಪ್ಸ್ ಅಕಾಡೆಮಿ ತಿತಿಮತಿ ಶಾಲೆಯಲ್ಲಿ ‘ಹವಾಮಾನ ಬದಲಾವಣೆ’ ಎಂಬ ವಿಷಯದಡಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರತಿಯೊಬ್ಬ ವಿದ್ಯಾರ್ಥಿಯು ಭವ್ಯ ಭವಿಷ್ಯದ ದೃಷ್ಟಿಯಿಂದ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮುಖ್ಯೋಪಾಧ್ಯಾಯರು ಸಲಹೆ ನೀಡಿದರು.

ಪರಿಸರ ದಿನಾಚರಣೆಯ ಕಾರ್ಯಕ್ರಮ ‘ಒಬ್ಬ ವಿದ್ಯಾರ್ಥಿ - ಒಂದು ಗಿಡ’ ಎಂಬ ಸಂದೇಶವನ್ನು ಸಾರುವುದರ ಜೊತೆಗೆ, ಹಸಿರು ಪರಿಸರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದಾಗಿದೆ. ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಅರಿವನ್ನು ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಸಹಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಾರಂಗಿ ನೀರಾವರಿ ಇಲಾಖೆ

ಕೂಡಿಗೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಾರಂಗಿ ನೀರಾವರಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಕೆಎಸ್‌ಐಎಸ್‌ಎಫ್ ಇಲಾಖೆಯ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಹಾರಂಗಿ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಇಂಜಿನಿಯರ್ ಸತೀಶ್, ಕಾರ್ಯಪಾಲಕ ಇಂಜಿನಿಯರ್ ಮಹೇಶ್, ತಾಂತ್ರಿಕ ಸಹಾಯಕ ಇಂಜಿನಿಯರ್ ಕವಿಪ್ರಸಾದ್, ಎ.ಇ.ಇ. ಪುಟ್ಟಸ್ವಾಮಿ, ಗೋಕುಲ್ ಹಾಗೂ ಸಹಾಯಕ ಇಂಜಿನಿಯರ್ ಕಿರಣ್ ಡಿ.ಡಿ., ಸಾಮಾಜಿಕ ಅರಣ್ಯ ವಲಯ ಅರಣ್ಯ ಅಧಿಕಾರಿಗಳಾದ ಪ್ರಮೋದ್, ಉಪವಲಯ ಅರಣ್ಯಾಧಿಕಾರಿಗಳಾದ ಹರೀಶ್, ಕುಮಾರ್, ಎನ್.ಬಿ. ಗಣೇಶ್, ಕೆಎಸ್‌ಐಎಸ್‌ಎಫ್ ಠಾಣಾಧಿಕಾರಿ ಸ್ವಾಮಿ ಹಾಜರಿದ್ದರು.

ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಮುಳ್ಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲೂಕು ಶನಿವಾರಸಂತೆ ವಲಯದ ವತಿಯಿಂದ ಸಮೀಪದ ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಿಡ್ತ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಕೆ. ಅಶೋಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ದಿನದ ಮಹತ್ವ ಕುರಿತು ಮಾತನಾಡಿ, ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಮೂಡಬೇಕು. ಆಗ ಮಾತ್ರ ಸುಂದರ ಪರಿಸರ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಹಿರಿಯ ನಿವೃತ್ತ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮೆಲ್ಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯೆ ಪೂರ್ಣಿಮಾ, ಒಕ್ಕೂಟದ ಅಧ್ಯಕ್ಷೆ ಎಸ್. ಜ್ಯೋತಿ, ಎಸ್‌ಡಿಎಂಸಿ ಅಧ್ಯಕ್ಷೆ ಜಿ.ಪಿ. ಸೌಮ್ಯ, ಅರಣ್ಯ ರಕ್ಷಕ ಕರಿಯಪ್ಪ, ವಲಯ ಮೇಲ್ವಿಚಾರಕ ಅಚ್ಚುತ, ಸೇವಾ ಪ್ರತಿನಿಧಿಗಳಾದ ತಾರಮಣಿ, ಶೋಭಾ, ಮಂಜುಳ ಮುಂತಾದವರಿದ್ದರು.

ಸಿದ್ದಾಪುರ ಸಂಜೀವಿನಿ ಒಕ್ಕೂಟ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಸಿದ್ದಾಪುರದ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಅಮೃತ ಕೆರೆಯಲ್ಲಿ ಪರಿಸರ ದಿನಾಚರಣೆಯನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಂಜೀವಿನಿ ಒಕ್ಕೂಟದ ಪ್ರಮುಖರಾದ ಎಂ.ಎ. ಯಮುನಾ ಮಾತನಾಡಿ, ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸಬೇಕೆಂದರು. ಮುಂದಿನ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಮೂಲಕ ಗಿಡ-ಮರಗಳನ್ನು ಸಂರಕ್ಷಣೆ ಮಾಡಬೇಕೆಂದು ಮತ್ತು ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭ ಅಮೃತ ಕೆರೆಯ ಸುತ್ತಲಿನಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ರೀನಾ ತುಳಸಿ, ವಸಂತಿ, ಯಮುನಾ, ಸುಮತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಇನ್ನಿತರರು ಹಾಜರಿದ್ದರು.

ವೀರಾಜಪೇಟೆ ಪ್ರಗತಿ ಶಾಲೆ

ವೀರಾಜಪೇಟೆ: ಪ್ರಗತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲೆಯ ವ್ಯವಸ್ಥಾಪಕಿ ಸುಷ್ಮಾ ತಿಮ್ಮಯ್ಯ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಪರಿಸರ ಸಂರಕ್ಷಣೆಯ ಮಹತ್ವ, ಮರಗಳ ಅಗತ್ಯತೆ ಹಾಗೂ ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸುವ ಭಾಷಣ, ಅಭಿನಯ ಗೀತೆ ಹಾಗೂ ಜಾಗೃತಿ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಟ್ಟಳ್ಳಿ

ಚೆಟ್ಟಳ್ಳಿ: ವಿಶ್ವ ಪರಿಸರ ದಿನಾಚರಣೆಯನ್ನು ಚೆಟ್ಟಳ್ಳಿಯ ಸ.ಹಿ.ಪ್ರಾ. ಶಾಲೆಯಲ್ಲಿ ಆಚರಿಸಲಾಯಿತು. ಸಿದ್ದಾಪುರದ ಮೀನಾಕ್ಷಿ ಜ್ಯುವೆಲ್ಲರಿ ಮಾಲೀಕ ರಾಜೇಂದ್ರಸಿAಗ್ ಶಾಲೆಗೆ ಸುಮಾರು ೧೫ ಸಾವಿರ ಬೆಲೆಬಾಳುವ ಹೂವಿನ ಗಿಡಗಳನ್ನು ನೀಡಿದರು.

ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ಮುಖ್ಯ ಶಿಕ್ಷಕಿ ರಮಾ, ಶಿಕ್ಷಕರು, ಮಕ್ಕಳು ವಿವಿಧ ಸಸಿಗಳನ್ನು ನೆಟ್ಟು ನೀರೆರೆದರು. ಶಿಕ್ಷಕಿ ವಿಲಾಸಿನಿ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು. ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ, ಶಿಕ್ಷಕಿ ಜಾಲಿ ಜೊಷ್ಟಿನ್ ವಂದಿಸಿದರು.

ಹಾರAಗಿ ಸಾಕಾನೆ ಶಿಬಿರ

ಚೆಟ್ಟಳ್ಳಿ: ಹಾರಂಗಿ ಸಾಕಾನೆ ಶಿಬಿರದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಪಶು ವೈದ್ಯಾಧಿಕಾರಿ ಡಾ. ಮುಜಿತ್ ಗಿಡ ನೆಡುವ ಮೂಲಕ ಚಾಲನೆ ನೀಡಿ ಉತ್ತಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕೆಂದರು.

ಈ ಸಂದರ್ಭ ಅರಣ್ಯ ಸಿಬ್ಬಂದಿಗಳು, ಆನೆ ಮಾವುತರು, ಕಾವಾಡಿಗಳು ಹಾಜರಿದ್ದರು.