ಹಾರಂಗಿ ಉದ್ಯಾನವನ
ಕುಶಾಲನಗರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾವೇರಿ ನೀರಾವರಿ ಇಲಾಖೆಯ ಹಾರಂಗಿ ಅಣೆಕಟ್ಟೆ ಯೋಜನೆಯ ಅಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಅಣೆಕಟ್ಟು ಭದ್ರತಾ ಇಲಾಖೆಯ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಹಾರಂಗಿ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು.
ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಸತೀಶ್, ಕಾರ್ಯಪಾಲಕ ಇಂಜಿನಿಯರ್ ಮಹೇಶ್, ತಾಂತ್ರಿಕ ಸಹಾಯಕ ಕವಿಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಗೋಕುಲ್ ಹಾಗೂ ಸಹಾಯಕ ಇಂಜಿನಿಯರ್ ಕಿರಣ್ ಡಿ.ಡಿ, ಸಾಮಾಜಿಕ ಅರಣ್ಯ ವಲಯ ಅರಣ್ಯ ಅಧಿಕಾರಿ ಪ್ರಮೋದ್, ಉಪವಲಯ ಅರಣ್ಯಧಿಕಾರಿ ಹರೀಶ್ ಕುಮಾರ್ ಎನ್.ಬಿ, ಗಣೇಶ್ ಎಂ, ಲೋಕೇಶ್, ಹಾರಂಗಿ ಅಣೆಕಟ್ಟು ಭದ್ರತಾ ಪಡೆಯ ಇನ್ಸ್ಪೆಕ್ಟರ್ ಸ್ವಾಮಿ ಇದ್ದರು.
ಸುಂಟಿಕೊಪ್ಪ ಸಂತ ಮೇರಿ ಶಿಕ್ಷಣ ಸಂಸ್ಥೆ
ಸುAಟಿಕೊಪ್ಪ: ಸುಂಟಿಕೊಪ್ಪ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ಸಂತ ಮೇರಿ ಶಿಕ್ಷಣ ಸಂಸ್ಥೆ ವತಿಯಿಂದ ಜಾಗೃತಿ ಜಾಥಾವನ್ನು ನಡೆಸಲಾಯಿತು.
ಸಂತ ಮೇರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳುವ ಮೂಲಕ ಜಲಮೂಲ, ಗಿಡ, ಮರ, ಜೀವ ಸಂಕುಲಗಳನ್ನು ಸಂರಕ್ಷಿಸುವ ಮೂಲಕ ಪರಿಸರವನ್ನು ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು. ಈ ಸಂದರ್ಭ ಸಂತ ಮೇರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಸೇಲ್ವರಾಜ್ ಮತ್ತು ಸಹ ಶಿಕ್ಷಕರು ಇದ್ದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ
ಮಡಿಕೇರಿ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಇಕೋ ಕ್ಲಬ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲೂಕಿನ ತಹಶೀಲ್ದಾರ್ ಸಂಜನಾ ಅವರು ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆಯ ಅಗತ್ಯತೆ, ಮರಗಳ ಮಹತ್ವ ಹಾಗೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿಗಳಾಗಿ ಅರಣ್ಯ ಇಲಾಖೆಯ ಡಿಎಫ್‌ಓ ಹಾಗೂ ಎಎಫ್‌ಓ ಇತರ ಅಧಿಕಾರಿಗಳು ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಶಾಲೆಯ ಉಪ ಪ್ರಾಂಶುಪಾಲರಾದ ಚೆಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದರು. ನಂತರ ಶಾಲಾ ಆವರಣದಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಹಶೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು, ಉಪಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿ ಡ್ಯಾನಿ ಎರಪ್ಪ, ಇಕೋ ಕ್ಲಬ್ ಸಂಚಾಲಕ ರಮೇಶ್ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಸೇರಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಕಲ್ಲುಬಾಣೆ ಬದ್ರಿಯಾ ಶಿಕ್ಷಣ ಸಂಸ್ಥೆ
ವೀರಾಜಪೇಟೆ: ಆರ್ಜಿ ಗ್ರಾಮದ ಕಲ್ಲುಬಾಣೆಯ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಂದ ಪರಿಸರ ದಿನದ ಅಂಗವಾಗಿ ಪೋಸ್ಟರ್ ತಯಾರಿಸಲಾಯಿತು ಹಾಗೂ ಭಾಷಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
೯ನೇ ತರಗತಿಯ ರಿಝಾ ಫಾತಿಮಾ ಹಾಗೂ ಅಫ್ಲಾ ಫಾತಿಮಾ, ೮ನೇ ತರಗತಿಯ ಫಾತಿಮತ್ ಸಿದಾ ಮತ್ತು ೪ನೇ ತರಗತಿಯ ಫಾತಿಮತ್ ನೂರಾ ಅವರು ವಿಶ್ವ ಪರಿಸರ ದಿನದ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ಮರಗಳ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಭಾಷಣಗಳನ್ನು ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಲವೀನ್ ಲೋಫೇಸ್ ಅವರು, ಪರಿಸರವನ್ನು ಕಾಪಾಡುವುದು ಕೇವಲ ಸರಕಾರದ ಅಥವಾ ಕೆಲವರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಬಳಿಕ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಅಧ್ಯಾಪಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶೋಭನ, ಸ್ಮಿತಾ, ನಿರ್ಮಲ, ಆದಿರ, ಚಂದ್ರಶೇಖರ್, ಪುಷ್ಪ, ಶ್ವೇತಾ, ರಾಜೀಯಾ ಧನ್ಯ, ಕಛೇರಿ ಸಿಬ್ಬಂದಿ ತಾರ, ಹಾಜಿರಾ ಹಾಗೂ ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಸೋಮವಾರಪೇಟೆ ಪಿಎಂಶ್ರೀ ಸರ್ಕಾರಿ ಶಾಲೆ
ಸೋಮವಾರಪೇಟೆ: ಇಲ್ಲಿನ ಪಿಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿಭಾಗದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿ ಗಳಿಗೆ ಪರಿಸರ ದಿನಾಚರಣೆಗೆ ಸಂಬAಧಿಸಿದAತೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕುಶಾಲನಗರ ರೋಟರಿ ಕ್ಲಬ್
ಕುಶಾಲನಗರ: ಕುಶಾಲನಗರ ರೋಟರಿ ಮೂಲಕ ಗಡಿಭಾಗದ ಕಾವೇರಿ ಹಳೆಯ ಸೇತುವೆಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನದಲ್ಲಿ ಗಿಡನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಶಾಲನಗರ ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ೩೦ಕ್ಕೂ ಅಧಿಕ ಅಲಂಕಾರಿಕ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ರೋಟರಿ ಕಾರ್ಯದರ್ಶಿ ಮಂಜುನಾಥ್, ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ಪ್ರಮುಖರಾದ ಎಸ್.ಕೆ ಸತೀಶ್, ಡಾ. ಹರೀಶ್ ಎ ಶೆಟ್ಟಿ, ಆರತಿ ಶೆಟ್ಟಿ, ಎಂ.ಡಿ ರಂಗಸ್ವಾಮಿ, ಶೋಭಾ ಸತೀಶ್, ಕಿರಣ್, ರುದ್ರೇಶ್ ಪಟೇಲ್, ಜೇಕಬ್, ರಾಣಿ ಉಲ್ಲಾಸ್, ಕ್ರೆಜ್ವಲ್ ಕೋಟ್ಸ್ ಮತ್ತಿತರರು ಇದ್ದರು.
ವೀರಾಜಪೇಟೆ ಪುರಸಭೆಯಿಂದ ಪ್ರಬಂಧ ಸ್ಪರ್ಧೆ
ವೀರಾಜಪೇಟೆ: ವೀರಾಜಪೇಟೆ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನ ಆವರಿಸಲಾಯಿತು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರದ ಕಾಳಜಿ ಹಾಗೂ ಪ್ಲಾಸ್ಟಿಕ್ ಮುಕ್ತ ನಗರದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಈ ಸಂದರ್ಭ ಮಾತನಾಡಿದ ಪುರಸಭೆ ಆರೋಗ್ಯಧಿಕಾರಿ ಕೋಮಲ, ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಪ್ಲಾಸ್ಟಿಕ್‌ನಿಂದ ಪ್ರಾಣಿಗಳು ಜೀವ ಕಳೆದುಕೊಂಡಿವೆ. ವಿದ್ಯಾವಂತರಾಗಿ ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ತರಕಾರಿ, ಹಾಲು ಹಾಗೂ ಇನ್ನಿತರ ದಿನಬಳಕೆಯ ಸಾಮಾಗ್ರಿಗಳನ್ನು ತರಲು ಬಟ್ಟೆ ಬ್ಯಾಗ್‌ಗಳನ್ನು ಬಳಸಿ, ಪರಿಸರವನ್ನು ಸ್ವಚ್ಛವಾಗಿ ಇರುವಂತೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭ ಪುರಸಭೆಯ ವ್ಯವಸ್ಥಾಪಕಿ ಸುಜಾತ, ಸಿಬ್ಬಂದಿಗಳಾದ ಕವಿತ, ಕುಮಾರಿ, ಭೂಮಿಕ ಕಾಲೇಜಿನ ಉಪನ್ಯಾಸಕರಾದ ರೈಮಂಡ್ ಸೇರಿದಂತೆ ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.
ಕೂಡಿಗೆ ಮೊರಾರ್ಜಿ ದೇಸಾಯಿ ಶಾಲೆ
ಕೂಡಿಗೆ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಹಸಿರೇ ಉಸಿರು. ಪ್ರಕೃತಿಯಿಂದ ಮನುಷ್ಯ ಹೊರತು ಮನುಷ್ಯನಿಗಾಗಿ ಪ್ರಕೃತಿ ಅಲ್ಲ. ಇತ್ತೀಚಿಗಿನ ಪ್ರಕೃತಿಯ ವಿಕೋಪಗಳಿಗೆ ನಾವೇ ನೇರ ಕಾರಣ ಪ್ರಕೃತಿಗೆ ಮಾಡುತ್ತಿರುವ ಹಾನಿ, ಮಾಲಿನ್ಯಗಳೇ ಕಾರಣ. ನಮಗೆ ಒಳಿತು ಮಾಡಿದ ಪ್ರಕೃತಿಗೆ ನಾವು ಕೆಡುಕು ಮಾಡಿದರೆ ನಮಗೆ ದೊರೆಯುವುದು ಕೆಡುಕೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸೋಣ, ಪ್ಲಾಸ್ಟಿಕ್ ಪರಿಸರಕ್ಕೆ ಅಂಟಿದ ಭೂತವಾಗಿ ಕಾಡುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ದೂರ ಮಾಡಿ ಎಂದು ಕರೆ ನೀಡಿದರು.
ಪ್ರಾಂಶುಪಾಲೆ ಕೆ.ಆರ್. ಭಾರತಿ ಮಾತನಾಡಿ, ಧರ್ಮೊ ರಕ್ಷಿತ ರಕ್ಷಿತಃ ಎಂಬAತೆ ಇಂದು ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಘೋಷ ವಾಕ್ಯವಿದೆ. ಐಪಿಎಲ್ ಪಂದ್ಯಾವಳಿಯಲ್ಲಿಯೂ ಗಿಡ ನೆಡುವ ಧ್ಯೇಯ ಹೊಂದಲಾಗಿದೆ. ನಾವು ಸಹ ಗಿಡಗಳನ್ನು ನೆಟ್ಟು ಬೆಳೆಸಬೇಕು. ಒಂದು ಮರ ಒಂದು ವನ ಒಂದು ಭವಿಷ್ಯ ಎಂಬ ನುಡಿಯಲ್ಲಿ ಬದುಕೋಣ ಎಂದು ಹೇಳಿದರು.
ಶಿಕ್ಷಕಿ ಅಮೃತಾ ಮಾತನಾಡಿ, ಈ ಭೂಮಿಯು ಹಚ್ಚ ಹಸಿರಾಗಿ, ಆಕಾಶ ನೀಲಿಯಾಗಿ ಕಂಗೊಳಿಸಲು ಈ ಪರಿಸರವೇ ಕಾರಣ. ಪರಿಸರ ಪ್ರೇಮಿಗಳಾದ ನಾವೆಲ್ಲರೂ ಪೃಕೃತಿಯನ್ನು ರಕ್ಷಿಸಿ, ಪೋಷಿಸಿ, ಬೆಳೆಸೋಣ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಸಮನ್ವಯಾಧಿಕಾರಿ ಕೆ.ಡಿ.ನೀತಾ ಕೊಡಗು ಕ್ರೈಸ್ಟ್ ವಸತಿ ಶಾಲೆಯಗಳ ಪ್ರಾಂಶುಪಾಲರು, ಸಹ ಶಿಕ್ಷಕರಾದ ಹೆಚ್.ಬಿ.ದಿನೇಶಾಚಾರಿ, ನಾಗೇಂದ್ರ, ಮಂಜು, ಮೀನಾ, ದೊಡ್ಡಯ್ಯ, ಕವಿತಾ, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿಸರ್ಗಸಿರಿ ಇಕೋ ಕ್ಲಬ್
ಶನಿವಾರಸಂತೆ: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ನಿಸರ್ಗಸಿರಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ನಿಸರ್ಗ ಸಿರಿ ಇಕೋ ಕ್ಲಬ್ ಸಂಚಾಲಕಿ ಹಾಗೂ ಶಿಕ್ಷಕಿ ಸವಿತಾ ವಿದ್ಯಾರ್ಥಿನಿಯರೊಂದಿಗೆ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಶಿಕ್ಷಕ ಕೆ.ಪಿ.ಜಯಕುಮಾರ್ ಮಾತನಾಡಿ, ಪರಿಸರದಿಂದಲೇ ಮಾನವನ ಬದುಕು ಎಂಬುದರ ಅರಿವು ವಿದ್ಯಾರ್ಥಿಗಳಿಗೆ ಇರಬೇಕು ಎಂದ ಅವರು, ಪರಿಸರ ದಿನದ ಮಹತ್ವ ಹಾಗೂ ಅರಣ್ಯಗಳಿಂದ ಮಾನವ ಕುಲಕ್ಕೆ ಆಗುತ್ತಿರುವ ಪ್ರಯೋಜನದ ಬಗ್ಗೆ ತಿಳಿಸಿದರು.
ಮುಖ್ಯ ಶಿಕ್ಷಕಿ ಸುಚಿತ್ರಾ, ಶಿಕ್ಷಕರಾದ ಅಂಜನಪ್ಪ, ಸಂದೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೊಹಮ್ಮದ್ ಜಹೀರ್ ಮಾತನಾಡಿ, ಪರಿಸರ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.