ಸಿದ್ದಾಪುರ, ಜೂ. ೫: ಬೈರಂಬಾಡ ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಸದ್ಯದಲ್ಲೇ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಸೀನ ಬಾನು ತಿಳಿಸಿದರು.
ಬೈರಂಬಾಡ ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಲಾದ ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾಹಿತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೂ ಕೂಡ ಕಾಡಾನೆಗಳು ಇದ್ದು, ಇದೀಗ ಅವುಗಳ ಸಂಖ್ಯೆ ಹೆಚ್ಚಾಗಿದೆ.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಸರಕಾರದ ವತಿಯಿಂದ ಸುಮಾರು ೨೭ ಕಿಲೋ ಮೀಟರ್ ದೂರದಷ್ಟು ಸೋಲಾರ್ ಬೇಲಿಯನ್ನು ಹಾಕಲಾಗಿದೆ. ಇದರಲ್ಲಿ ಶೇ. ೮೦ ರಷ್ಟು ಸೋಲಾರ್ ಬೇಲಿಗಳು ಕಾರ್ಯನಿರ್ವಹಿಸುತ್ತಿದ್ದು ಶೇ. ೨೦ರಷ್ಟು ಕಡಿಮೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬAದಿದೆ. ಸೋಲಾರ್ ಬೇಲಿಯೂ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗದಿಂದ ಕಾಡಾನೆಗಳು ನುಸಳಿ ಬರುತ್ತಿವೆ ಎಂದರು.
ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ತಾಸೀನ ಬಾನು ಅವರು, ದೇವರ ಕಾಡು ಜಾಗದಲ್ಲಿ ಕಾಡಾನೆಗಳು ಬೀಡುಬಿಟ್ಟು ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಾ ದಾಂಧಲೆ ನಡೆಸುತ್ತಿರುವುದು ಹಾಗೂ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ದೇವರ ಕಾಡು ಜಾಗವನ್ನು ಅರಣ್ಯ ಇಲಾಖೆಯು ಸಂರಕ್ಷಣೆ ಮಾಡಿ ಆ ಜಾಗದ ಸುತ್ತಲೂ ಸೋಲಾರ್ ಬೇಲಿಯನ್ನು ಅಳವಡಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಂಡು ಕಾಡಾನೆಗಳು ಅಲ್ಲಿ ವಾಸ್ತವ್ಯ ಹೂಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾಡಾನೆಗಳು ಸಂಚರಿಸುತ್ತಿರುವುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಡ್ರೋನ್ ಕ್ಯಾಮರಾ ಕಾರ್ಯನಿರ್ವಹಿಸುತ್ತಿದೆ. ಕಾಡಾನೆಗಳನ್ನು ಕಾಡಿಗಟ್ಟುವ ಹೊಸ ಯೋಜನೆಯ ಪ್ರಕಾರ ಎ.ಐ. ಕ್ಯಾಮರಗಳನ್ನು ಬಳಸಿ ಅದರಲ್ಲಿ ವಿವಿಧ ರೀತಿಯ ಶಬ್ದಗಳನ್ನು ಹೊರಹೊಮ್ಮಿಸುವ ಮೂಲಕ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ತಂತ್ರವನ್ನು ಕಾರ್ಯರೂಪಕ್ಕೆ ತರಲಾಗಿದೆ.
ಈಗಾಗಲೇ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಕೆಲವು ತೋಟದ ಮಾಲೀಕರು ಕಾರ್ಯಾಚರಣೆ ತಂಡದ ಸಿಬ್ಬಂದಿಯನ್ನು ತೋಟದೊಳಗೆ ಬಿಡದೆ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವುದರಿಂದ ಅರಣ್ಯ ಇಲಾಖೆಗೆ ಸಮಸ್ಯೆಯಾಗಿದೆ ಎಂದರು. ವನ್ಯಪ್ರಾಣಿಗಳಿಂದ ನಷ್ಟಕ್ಕೆ ಒಳಗಾದ ಕೃಷಿಕರು ರೈತರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದ ಅವರು, ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು ಎಂದರು. ಈಗಾಗಲೇ ಕಾಡಾನೆ ದಾಳಿಗೆ ಸಿಲುಕಿ ಮಾನವನ ಸಾವಿಗೆ ಪರಿಹಾರ ಸೇರಿದಂತೆ ವೀರಾಜಪೇಟೆಯ ತಾಲೂಕಿನಲ್ಲಿ ಈವರಿಗೆ ಒಟ್ಟು ರೂ ೪.೮ ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ವತಿಯಿಂದ ಆಯಾ ಗ್ರಾಮದ ಗ್ರಾಮಸ್ಥರನ್ನು ಸೇರಿಸಿ ಗ್ರೂಪ್ ಮಾಡಲಾಗಿದೆ. ಅದರಲ್ಲಿ ಕಾಡಾನೆಗಳ ಸಂಚಾರದ ಬಗ್ಗೆ ಮಾಹಿತಿ ನೀಡಿ ಎಚ್ಚರಿಕೆಯನ್ನು ನೀಡಲಾಗುತ್ತಿದ್ದು ಅದನ್ನು ಗ್ರಾಮಸ್ಥರು ಪರಿಶೀಲಿಸಿ ಎಚ್ಚರವಹಿಸಬೇಕೆಂದು ಹಾಗೂ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಾಸೀನ ಬಾನು ಮನವಿ ಮಾಡಿದರು.
ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಂದಿಕAಡ ದಿನೇಶ್ ಮಾತನಾಡಿ, ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಹಾಲುಗುಂದ ಗ್ರಾಮ ಪಂಚಾಯಿತಿ ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಎಲ್ಲಾ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಮೂರು ದಿನಗಳ ಕಾಲ ಈ ಎರಡು ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಧ್ವನಿವರ್ಧಕದ ಮುಖಾಂತರ ಮಾಹಿತಿ ನೀಡಿ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸುವಂತಾಗಬೇಕೆAದರು.
ಹಾಲುಗುAದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೧೮ ಎಕರೆ ದೇವರ ಕಾಡು ಜಾಗವಿದ್ದು ಈ ಜಾಗವು ಒತ್ತುವರಿಯಾಗಿದೆ. ಇದನ್ನು ಸರ್ವೆ ಮಾಡಿ ವಿಸ್ತೀರ್ಣವನ್ನು ಗುರುತಿಸಿ ಸೋಲಾರ್ ಬೇಲಿಯನ್ನು ಅಳವಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿದರು.
ಗ್ರಾಮಸ್ಥರಾದ ಮುಕ್ಕಾಟ್ಪಿರ ರವಿ ಬೋಪಣ್ಣ ಮಾತನಾಡಿ, ಕಾಡುಪ್ರಾಣಿಗಳಿಗೆ ಕಾಡಿನಲ್ಲಿ ಆಹಾರದ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಹಾಗೂ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದರು. ಗ್ರಾಮಸ್ಥರಾದ ಸೋಮಯ್ಯ ಮಾತನಾಡಿ, ಅರಣ್ಯ ಇಲಾಖೆ ಅರಣ್ಯದಲ್ಲಿ ಪ್ರಾಣಿಗಳಿಗೆ ಕೆರೆಗಳನ್ನು ತೋಡಿ ನೀರಿನ ವ್ಯವಸ್ಥೆ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಯನ್ನು ಸಮರ್ಪಕವಾಗಿ ಮಾಡಬೇಕೆಂದು ಒತ್ತಾಯಿಸಿದ ಅವರು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿ ಯಾವುದೇ ಪ್ರಯೋಜನವಿಲ್ಲವೆಂದರು.
ಇದೇ ಸಂದರ್ಭ ಗ್ರಾಮಸ್ಥರು ಮಾತನಾಡಿ, ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಅಥವಾ ಸಂತಾನಹರಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಭಾಗದಲ್ಲಿ ಕಾಡಾನೆಗಳೊಂದಿಗೆ ಕಾಡುಕೋಣ, ಮಂಗಗಳ ಹಾವಳಿ ಕೂಡ ಇದೆ ಸರ್ಕಾರಿ ಶಾಲೆ ಸುತ್ತಮುತ್ತಲೂ ಕಾಡಾನೆಗಳು ಓಡಾಡುತ್ತಿವೆ. ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಕಾರ್ಮಿಕರು ದಿನಕ್ಕೆ ಎರಡು ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು. ಕಾಡಾನೆಗಳು ಒಂದಾಗುವ ಕೃಷಿ ಫಸಲುಗಳ ನಷ್ಟಕ್ಕೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಕಾಡಾನೆ ಹಾವಳಿ ಸಮಸ್ಯೆಯನ್ನು ಅರಣ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸಲು ಪ್ರಯತ್ನಿಸಬೇಕೆಂದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕಾರ್ಯಕ್ರಮವನ್ನು ಗ್ರಾಮಸ್ಥರಾದ ಮುಕ್ಕಾಟಿರ ರವಿ ಬೋಪಣ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ, ಉಪ ವಲಯ ಅರಣ್ಯ ಅಧಿಕಾರಿ ಮನೋಜ್ ಮತ್ತು ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪದ್ಮ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಗ್ರಾಮಸ್ಥರು ಕಾಡು ಪ್ರಾಣಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. -ವಾಸು ಎ.ಎನ್.