ವೀರಾಜಪೇಟೆ, ಜೂ. ೫: ಕೇರಳದ ಶಬರಿಮಲೆ, ಗುರುವಾಯೂರು, ತಳಿಪರಂಬ್ನಲ್ಲಿ ರಾಜರಾಜೇಶ್ವರಿ, ಮಾಡೈಕಾವು ಪರಶಿಣಿಕಡವು, ಮಾಮಾನಿಕುನ್ನ್ ಮುಂತಾದ ಪುಣ್ಯಕ್ಷೇತ್ರಗಳು ಶತಮಾನಗಳಿಂದಲೂ ಕೊಡಗಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಾ ಬಂದಿದ್ದರೆ ಎರಡು ವರ್ಷಗಳಿಂದ ಕೇರಳದ ಇನ್ನೊಂದು ಪುಣ್ಯಕ್ಷೇತ್ರ ಕೊಡಗಿನವರನ್ನು ಆಕರ್ಷಿಸಿದೆ.
ದೇವರ ಸ್ವಂತ ನಾಡು ಕೇರಳದ ಪ್ರಕೃತಿಯ ಮಡಿಲಲ್ಲಿರುವ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.
ಕಣ್ಣೂರು ಜಿಲ್ಲೆಯಲ್ಲಿರುವ ಅಕ್ಕರೆ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ೨೭ ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿತ್ತು. ಒಮ್ಮೆಲೆ ಕೊಟ್ಟಿಯೂರಿನ ಕೀರ್ತಿ ಕೊಡಗು ಸೇರಿದಂತೆ ಕರ್ನಾಟಕದಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಕೇರಳ ರಾಜ್ಯದ ಎರಡನೇ ಅತೀ ಶ್ರೀಮಂತ ದೇಗುಲ ಎಂದು ಹೆಸರುವಾಸಿಯಾಗಿರುವ ಈ ಕೊಟ್ಟಿಯೂರು ಕ್ಷೇತ್ರ ಇರುವುದು ದಟ್ಟ ಅಭಯಾರಣ್ಯದ ಮಧ್ಯೆ. ಪುರಾಣ ಕಥೆಯೊಂದಿಗೆ ಸಂಬAಧವಿರುವ ಅಕ್ಕರೆ ಕೊಟ್ಟಿಯೂರು ಸನ್ನಿಧಿಯಲ್ಲಿ ಸ್ಥಾವರ ರೂಪದ ಶಾಶ್ವತ ದೇವಸ್ಥಾನಗಳಿಲ್ಲ. ವೈಶಾಖ ಮಹೋತ್ಸವಕ್ಕಾಗಿ ಪ್ರಕೃತಿದತ್ತವಾದ ತಾತ್ಕಾಲಿಕ ಚಪ್ಪರ ಮಂದಿರ ನಿರ್ಮಿಸಲಾಗಿದ್ದು, ಪರಮೇಶ್ವರನ ಉದ್ಭವಲಿಂಗ ದರ್ಶನಕ್ಕಾಗಿ ಕೊಡಗು ಸೇರಿದಂತೆ ಕರ್ನಾಟಕ ರಾಜ್ಯದಿಂದ ಸಾವಿರಾರು ಭಕ್ತರು ಹೋಗಿ ಬಂದಿದ್ದಾರೆ.
ಜೂನ್ ೨೪ ರವರೆಗೆ ಮಹೋತ್ಸವ ನಡೆಯಲಿದ್ದು, ಜಿಲ್ಲೆಯಿಂದ ಸಾವಿರಾರು ಭಕ್ತರು ಹೋಗಿ ಬರುತ್ತಿದ್ದಾರೆ. ವಾವಲಿ ನದಿ ತಟದಲ್ಲಿರುವ ಕೊಟ್ಟಿಯೂರು ಕ್ಷೇತ್ರ ಸುಮಾರು ೩೦,೦೦೦ ಎಕರೆ ವನ್ಯಧಾಮ ವ್ಯಾಪ್ತಿಯಲ್ಲಿ ಬರುತ್ತದೆ. ಶಬರಿಮಲೆಯಂತೆ ಇದು ಕೂಡ ಪ್ರಕೃತಿ ರಮಣೀಯ ತಾಣ. ಹತ್ತಾರು ಪ್ರಾಚೀನ ಸಾಂಪ್ರದಾಯಿಕ ಆಚರಣೆಗಳು ಈಗಲೂ ಇಲ್ಲಿ ಮೂಲರೂಪದಲ್ಲಿ ಉಳಿದುಕೊಂಡಿವೆ.
ಲಕ್ಷಾಂತರ ಜನ
ಕೊಡಗಿನಿಂದಲೂ, ಇಡೀ ಕರ್ನಾಟಕ ರಾಜ್ಯದಿಂದ ಈ ಬಾರಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಮಹೋತ್ಸವದ ಹಿನ್ನಲೆ ಒಮ್ಮೆಲೆ ಸಾವಿರಾರು ಭಕ್ತರ ಆಗಮನದ ಹಿನ್ನಲೆ ಕ್ಷೇತ್ರದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ.
ಪೌರಾಣಿಕ ಹಿನ್ನೆಲೆ
ಪ್ರಜಾಪತಿ ದಕ್ಷ ಮಹಾರಾಜ ಯಾಗ ಮಾಡಿದ ಜಾಗವಿದು ಎಂಬುದು ಐತಿಹ್ಯ. ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆ ಮಾಡಿಕೊಂಡಳು ಎಂಬ ಪ್ರತೀತಿ ಇದೆ. ಆ ಯಜ್ಞ ನಡೆದ ಸ್ಥಳವೇ ಇದು ಎಂಬುದು ಇಲ್ಲಿನ ಪ್ರತೀತಿ. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ದರ್ಶನ ಮಾಡಿದರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಅಂದು ಆಶೀರ್ವಾದ ಮಾಡಿದ್ದನಂತೆ.
ದಿನಕ್ಕೆ ಎರಡು ಶೀವೇಲಿ ಆಚರಣೆ
ಇಲ್ಲಿ ದಿನಕ್ಕೆ ಎರಡು ಶೀವೇಲಿ ಆಚರಣೆ ನಡೆಯುತ್ತದೆ. ಅಂದರೆ ಎರಡು ಆನೆಗಳನ್ನು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಇದು ಶಿವ ಮತ್ತು ಪಾರ್ವತಿಯ ಸ್ವರೂಪ. ಹೀಗೆ ಕೊಟ್ಟಿಯೂರು ಶ್ರೀ ಕ್ಷೇತ್ರ ವಿಶಿಷ್ಟ ಆಚರಣೆಗಳ ತವರೂರಾಗಿದೆ.
ಹಲವು ವಿಶೇಷತೆಗಳ ತಾಣ
ಕಣ್ಣೂರು ಜಿಲ್ಲಾ ಕೇಂದ್ರದಿAದ ೬೮ ಕಿಲೋಮೀಟರ್, ವೀರಾಜಪೇಟೆ ಯಿಂದ ೭೧ ಕಿ.ಮಿ ದೂರದಲ್ಲಿದೆ ಕೊಟ್ಟಿಯೂರು ಕ್ಷೇತ್ರ. ವಾವಲಿ ನದಿಯ ಎಡದಂಡೆಯಲ್ಲಿ ಇಕ್ಕರೆ ಕೊಟ್ಟಿಯೂರು ಶಾಶ್ವತ ದೇವಾಲಯವಿದೆ. ಬಲದಂಡೆಯಲ್ಲಿ ಅಕ್ಕರೆ ಕೊಟ್ಟಿಯೂರು ಉದ್ಭವ ಲಿಂಗವಿದೆ.
ಅಕ್ಕರೆಕೊಟ್ಟಿಯೂರಿನ ೨೭ ದಿನಗಳ ವೈಶಾಖ ಮಹೋತ್ಸವ ಸಂದರ್ಭ ಇಕ್ಕರೆ ಕೊಟ್ಟಿಯೂರಿನಲ್ಲಿ ಏನೂ ವಿಶೇಷತೆ ಇರುವುದಿಲ್ಲ. ಮೆ.೨೩ ರಂದು ಆರಂಭಗೊAಡ ವೈಶಾಖ ಮಹೋತ್ಸವ ಜೂನ್ ೨೪ ರಂದು ಕೊನೆಗೊಳ್ಳಲಿದೆ. ವಾವಲಿ ನದಿ ದಂಡೆಯಲ್ಲೇ ಕ್ಷೇತ್ರವಿದ್ದು ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿರುವ ಕಲ್ಲುಗಳನ್ನು ತಿಕ್ಕಿದರೆ ಪವಿತ್ರ ಗಂಧ ಸಿಗುತ್ತದೆ. ನದಿ ಪಕ್ಕದ ಪ್ರಾಕೃತಿಕ ಜಲರಾಶಿಯಲ್ಲಿ ಕ್ಷೇತ್ರವಿದ್ದು ಅಬ್ಬರ, ಆಡಂಬರ ಕಟ್ಟಡ ಆಲಯಗಳಿಲ್ಲದ ತಾಣದಲ್ಲಿ ಜಲರಾಶಿಯ ಮಡಿಲಲ್ಲಿ ಭಕ್ತರು ಉದ್ಭವಲಿಂಗ ದರ್ಶನ ಮಾಡುತ್ತಾರೆ. ವೈಶಾಖ ಮಹೋತ್ಸವದ ಮೊದಲ ಎರಡು ದಿನ ಮತ್ತು ಕೊನೆಯ ನಾಲ್ಕು ದಿನ ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಬಿದಿರಿನ ದಂಟನ್ನೇ ಸೀಳಿ ದಾರದ ಗೊಂಚಲು ಸೃಷ್ಟಿಸಿ ಮಾಡಿದ ಓಡಾ-ಪೂ ಕೊಟ್ಟಿಯೂರಿನ ವಿಶೇಷ ಆಕರ್ಷಣೆಯ ವಸ್ತು. ನದಿಯ ಪೂರ್ವ ತಟದಲ್ಲಿರುವ ಕ್ಷೇತ್ರವನ್ನು ಕೇಳಕೇಶ್ವರ ಕ್ಷೇತ್ರ ಅಥವಾ ಅಕ್ಕರೆ ಕೊಟ್ಟಿಯೂರು ಎಂದೂ ಪಶ್ವಿಮ ಪಾರ್ಶ್ವದಲ್ಲಿರುವ ಕ್ಷೇತ್ರವನ್ನು ವಡಕೇಶ್ವರ ಅಥವಾ ಇಕ್ಕರೆ ಕೊಟ್ಟಿಯೂರು ಎಂದು ಆ ಭಾಗದ ಜನ ಕರೆಯುತ್ತಾರೆ.
೨೭ ದಿನಗಳು ಮಾತ್ರ ಭಕ್ತರ ಭೇಟಿ
ವಡಕೇಶ್ವರ ಅಥವಾ ಇಕ್ಕರೆ ಕೊಟ್ಟಿಯೂರು ಕ್ಷೇತ್ರಕ್ಕೆ ವರ್ಷದಲ್ಲಿ ೨೭ ದಿನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲೂ ಈ ಕ್ಷೇತ್ರಕ್ಕೆ ಭಕ್ತಾದಿಗಳ ಭೇಟಿಗೆ ಅವಕಾಶವಿದೆ. ಆದರೆ ಅಕ್ಕರೆ ಕೊಟ್ಟಿಯೂರು ಅಥವಾ ಕೇಳಕೇಶ್ವರ ಕ್ಷೇತ್ರ ವರ್ಷದಲ್ಲಿ ಕೇವಲ ೨೭ ದಿನಗಳು ಮಾತ್ರ ಭಕ್ತರ ಭೇಟಿಗೆ ತೆರೆದಿರುವ ಕ್ಷೇತ್ರವಾಗಿದೆ.
ಹಳೆಯ ಸಂಪ್ರದಾಯದAತೆಯೇ ಇಲ್ಲಿ ಆಚರಣೆಗಳು ನಡೆಯುತ್ತಿದ್ದು, ಇಲ್ಲಿ ತೆಂಗಿನ ಗರಿಗಳಿಂದ ತಯಾರಿಸಿದ ಜೋಪಡಿಗಳಂತಹ ರಚನೆಗಳು ಇಲ್ಲಿದ್ದು, ವೈಶಾಖ ಮಾಸದ ದಿನಗಳಷ್ಟೇ ಈ ಕ್ಷೇತ್ರ ಭಕ್ತರಿಗೆ ತೆರೆದಿರುತ್ತದೆ. ಬಳಿಕದ ದಿನಗಳಲ್ಲಿ ಈ ಅರಣ್ಯದೊಳಗೆ ಜನರ ಸಂಚಾರಕ್ಕೆ ಸಂಪೂರ್ಣ ನಿಷೇಧವಾಗಿದೆ.
ಆನೆಯ ಮೇಲೆ ಪ್ರದಕ್ಷಿಣೆ
ಸತಿಯು ಇಲ್ಲಿ ಬೆಂಕಿಗೆ ಹಾರಿ ದೇಹತ್ಯಾಗ ಮಾಡಿದ್ದಾಳೆ ಎನ್ನುವ ನಂಬಿಕೆ ಭಕ್ತರದ್ದಾಗಿದ್ದು, ಸತಿಯು ಕುಳಿತ ಪೀಠದಂತಹ ಜಾಗ ಇಲ್ಲಿ ಇಂದಿಗೂ ಕಾಣಸಿಗುತ್ತದೆ. ದಟ್ಟ ಅರಣ್ಯ ಮತ್ತು ನದಿಯ ತಟದಲ್ಲಿರುವ ಕಾರಣ ಈ ಕ್ಷೇತ್ರದ ಸುತ್ತಲೂ ನೀರು ಆವರಿಸಿದ್ದು, ಇಲ್ಲಿನ ಶಿವ ಪಾರ್ವತಿಯ ಮೂರ್ತಿಯನ್ನು ಈ ಕ್ಷೇತ್ರದ ಸುತ್ತಲೂ ಆನೆಯ ಮೇಲೆ ಪ್ರದಕ್ಷಿಣೆ ಮಾಡಲಾಗುತ್ತಿದ್ದು, ಇದುವೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಹರಿಯುವ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳು
ಇಲ್ಲಿ ಹರಿಯುವ ನದಿಯಲ್ಲಿ ಸಿಗುವ ಕಲ್ಲುಗಳು ವಿಶಿಷ್ಟ ಗುಣಧರ್ಮವನ್ನು ಹೊಂದಿದ್ದು, ಈ ಕಲ್ಲನ್ನು ಉಜ್ಜಿದಲ್ಲಿ ಅದು ಶ್ರೀಗಂಧದ ಪರಿಮಳವನ್ನು ಸೂಸುತ್ತದೆ ಎನ್ನಲಾಗುತ್ತಿದ್ದು, ಈ ಕ್ಷೇತ್ರಕ್ಕೆ ಬರುವ ಜನ ಇಲ್ಲಿನ ಕಲ್ಲುಗಳನ್ನೂ ದೇವತಾರೂಪದಲ್ಲಿ ಪೂಜಿಸುತ್ತಾರೆ.
ಈ ಬಾರಿ ಕಣ್ಣೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಕರ್ನಾಟಕದಿಂದ ಆಗಮಿಸುವ ಭಕ್ತರು ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸಾವಿರಾರು ವಾಹನಗಳು ತೆರಳುತ್ತಿರುವುದರಿಂದ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ, ಬಂದೋಬಸ್ತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕ್ಷೇತ್ರದಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಜನ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. -ವರದಿ: ಈಶಾನ್ವಿ