ಸೋಮವಾರಪೇಟೆ, ಜೂ. ೫: ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿಯಲ್ಲಿರುವ ಮಾಗಡಿ-ಜಾಲ್ಸೂರು ರಾಜ್ಯಹೆದ್ದಾರಿಗೆ ಒಳಪಡುವ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ ರಸ್ತೆಯ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ತೀರಾ ಶಿಥಿಲಾವಸ್ಥೆಗೆ ತಲುಪಿರುವ ಮೋರಿಯ ಮೇಲೆಯೇ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಲೇಕಟ್ಟೆಯಿಂದ ಇನಕನಹಳ್ಳಿಯವರೆಗಿನ ರಸ್ತೆ ಅಭಿವೃದ್ಧಿಗೆ ಕಿ.ಮೀಗೆ ಹೆಚ್ಚೂಕಮ್ಮಿ ೧ ಕೋಟಿಯಷ್ಟು ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ. ಇಷ್ಟೊಂದು ಬೃಹತ್ ಮೊತ್ತದ ಅನುದಾನ ನೀಡಿದ್ದರೂ ಸಹ ಶಿಥಿಲಾವಸ್ಥೆಯಲ್ಲಿರುವ ಮೋರಿಯ ಮೇಲೆಯೇ ಕಾಂಕ್ರಿಟ್ ರಸ್ತೆ ಮಾಡುತ್ತಿರುವುದು ಸಮಂಜಸವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ರಾಜ್ಯ ಹೆದ್ದಾರಿಯಿಂದ ಕಲ್ಕಂದೂರು ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯ ಸಮೀಪ, ತಿರುವಿನಲ್ಲಿ ಇರುವ ತೋಡಿಗೆ ಈ ಹಿಂದೆಯೇ ಮೋರಿಯನ್ನು ನಿರ್ಮಿಸಲಾಗಿತ್ತು. ಇದು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಪ್ರತಿ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ನೀರು ನಿಂತು ಸಣ್ಣ ಕೆರೆ ನಿರ್ಮಾಣವಾಗುತ್ತಿತ್ತು. ಇದೀಗ ನೂತನವಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗುತ್ತಿದ್ದರೂ ಈ ಮೋರಿಯನ್ನು ದುರಸ್ತಿ ಪಡಿಸಲು ಮುಂದಾಗಿಲ್ಲ.
ಇದು ಸಂಬAಧಿಸಿದ ಲೋಕೋಪಯೋಗಿ ಇಲಾಖೆಯ ಅಭಿಯಂತರರ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತಿದೆ ಎಂದು ಸ್ಥಳೀಯರು ಪತ್ರಿಕೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.