ಸೋಮವಾರಪೇಟೆ, ಜೂ. ೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಸ್ಥಳೀಯ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಸ್.ಆರ್. ಸೋಮೇಶ್ ನೆರವೇರಿಸಿ ಮಾತನಾಡಿ, ತಂಬಾಕು ಬಳಕೆಯಿಂದ ಉಂಟಾಗುವ ಆರೋಗ್ಯ ಹಾನಿ, ಆರ್ಥಿಕ ನಷ್ಟ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರೋಗ, ಉಸಿರಾಟದ ಸಮಸ್ಯೆಗಳು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳು ಉಂಟಾಗುತ್ತವೆ. ಸಿಗರೇಟ್, ಬೀಡಿ, ಗುಟ್ಕಾ, ಪಾನ್ ಮಸಾಲ ಮುಂತಾದ ತಂಬಾಕು ಉತ್ಪನ್ನಗಳು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲ, ಕುಟುಂಬ ಮತ್ತು ಸಮಾಜಕ್ಕೂ ಹಾನಿಕಾರಕವಾಗಿವೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಅವರು ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆದರ್ಶ ವ್ಯಕ್ತಿತ್ವ, ಗುಣ, ನಡತೆಗಳು ಇರಬೇಕು. ಸಮಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ತಂದೆ ತಾಯಿಗೆ ಉತ್ತಮ ಮಕ್ಕಳಾಗಿ, ಶಾಲೆಗೆ ಆದರ್ಶ ವಿದ್ಯಾರ್ಥಿಗಳಾಗಿರಬೇಕು. ದುಶ್ಚಟಗಳಿಂದ ದೂರವಿರಬೇಕು. ದುರಭ್ಯಾಸ ಕಲಿಸಿದವನಿಗಿಂತ ಕಲಿತವನೇ ಬೇಗ ನಾಶವಾಗುತ್ತಾನೆ ಎಂಬುದನ್ನು ಮರೆಯಬಾರದು ಎಂದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ, ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ, ಸೇವಾ ಪ್ರತಿನಿಧಿ ತಾರಾಲಕ್ಷಿö್ಮÃ, ವಲಯ ಮೇಲ್ವಿಚಾರಕ ದೇವೇಂದ್ರ ಪ್ರಸಾದ್ ಸೇರಿದಂತೆ ಇತರರು ಇದ್ದರು.