ವೀರಾಜಪೇಟೆ, ಜೂ. ೨: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ವರ್ಣರಂಜಿತವಾಗಿ ತೆರೆಬಿತ್ತು. ಪಾರಣ ಬೇಡು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಬೇರಳಿನಾಡಿನ ಗ್ರಾಮಸ್ಥರು ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ಸಂಭ್ರಮದಿAದ ಬೀಳ್ಕೊಟ್ಟರು.
ದಕ್ಷಿಣ ಕೊಡಗಿನ ಬೇರಳಿನಾಡಿನ ಯಾವುದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆ(ಹಬ್ಬ)ಯ ವೇಷಧಾರಿಗಳ ಸಾಂಪ್ರದಾಯಿಕ ಕುಣಿತ, ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಎಲ್ಲರೂ ಮಗ್ನರಾಗಿದ್ದರು. ಬೇರಳಿನಾಡಿದಾದ್ಯಂತ ಪಾರಣ ಹಬ್ಬದ ಕಲರವದಿಂದಾಗಿ ಐತಿಹಾಸಿಕ ಈ ಬೇಡು ಹಬ್ಬ ವಿಶೇಷವಾಗಿ ರಂಗೇರಿತ್ತು.
ಮೇ.೨೬ ರಂದು ಹಬ್ಬಕ್ಕೆ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ದೊರೆತ ಪಾರಣ ನಮ್ಮೆಯಲ್ಲಿ ಅಬಾಲವೃದ್ಧರಾಗಿ ಉತ್ಸಾಹದಿಂದ ಪಾಲ್ಗೊಂಡಿದ್ದ ಅಸಂಖ್ಯಾತ ಗ್ರಾಮಸ್ಥರು ಇಡೀ ಎರಡು ದಿನ ಹಬ್ಬದಲ್ಲೇ ತಲ್ಲೀನರಾಗಿದ್ದರು. ಇತಿಹಾಸ ಪ್ರಸಿದ್ಧ ಪಾರಣ ಬೇಡು ಹಬ್ಬವನ್ನು ಸಾಕ್ಷೀಕರಿಸಲು ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ನೆಂಟರಿಷ್ಟರು ಈ ಬಾರಿ ಬೇರಳಿನಾಡಿಗೆ ಬಂದಿದ್ದರು.
‘ಕಳಿ’ ತಂಡಗಳೊAದಿಗೆ ೪ ಡೋಲುಗಳನ್ನು ಹೊತ್ತು ಅವುಗಳನ್ನು ಬಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮನೆ ಮನೆಗೆ ತೆರಳುವ ವೇಷಧಾರಿಗಳು ಬೇಡು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು. ಇವರೊಂದಿಗೆ ಕೊಡಗಿನ ಯರವ ಜನಾಂಗದ ಕಲಾವಿದರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಚೀನಿವಾದ್ಯದ ಮೂಲಕ ವೇಷಧಾರಿಗಳನ್ನು ಹಿಂಬಾಲಿಸುತ್ತಿದ್ದ ದೃಶ್ಯ ಪಾರಣ ಬೇಡು ಹಬ್ಬವನ್ನು ಮತ್ತಷ್ಟು ರಂಗೇರಿಸಿದAತಿತ್ತು.
ಕAಡAಗಾಲ ಗ್ರಾಮದಲ್ಲಿರುವ ಪಾರಣಮಾನಿಯಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಗ್ರಾಮವಾಸಿಗಳು ಕೆಸರಿನಲ್ಲಿ ಮಿಂದೆದ್ದು ಬೇಡು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಅಂತಿಮವಾಗಿ ಕೊಡವರ ಪ್ರಸಿದ್ದ ನಾಣ್ನುಡಿಯಾದ ಕುಂದತ್ ಬೊಟ್ಟ್ಲ್ ನೇಂದ ಕುದುರೆ, ಪಾರಣಮಾನಿಲ್ ಅಳ್‌ಂಜ ಕುದುರೆ ಎಂಬAತೆ ಪಾರಣ ಬೇಡುಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಬಿದಿರಿನಿಂದ ತಯಾರಿಸಲಾದ ೨ ಆನೆ ಮತ್ತು ೩ ಕುದುರೆಯಾಕೃತಿಯನ್ನು ಪಾರಣಮಾನಿಯಲ್ಲಿ ಕಡಿಯುವುದರ ಮೂಲಕ ದಕ್ಷಿಣ ಕೊಡಗಿನ ಐತಿಹಾಸಿಕ ಕೊನೆಯ ಬೇಡು ಹಬ್ಬಕ್ಕೆ ಮಂಗಳ ಹಾಡಲಾಯಿತು.
ದಕ್ಷಿಣ ಕೊಡಗಿನ ೯ ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ಪಾರಣ ನಮ್ಮೆಯ ಅಂಗವಾಗಿ ೨ ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಿವಿಧೆಡೆ ನೆಲೆಸಿರುವ ಗ್ರಾಮವಾಸಿಗಳು ದೂರ ದೂರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ಆಗಮಿಸಿ ಪಾರಣಮಾನಿ ಹಬ್ಬಕ್ಕೆ ಸಾಕ್ಷಿಯಾದರು. ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಹಬ್ಬದಂದು ದೇಶದ ಯಾವುದೇ ಭಾಗದಲ್ಲಿದ್ದರೂ ಬೇರಳಿನಾಡಿನ ನಿವಾಸಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಭಿಮಾನದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿದೆ. ಬೆಳಿಗ್ಗಿನಿಂದಲೇ ಬೇರಳಿನಾಡಿನ ೯ ಕೇರಿಗಳಲ್ಲಿ ಪಾರಣಮಾನಿ ಹಬ್ಬದ ಪ್ರತೀಕವಾಗಿ ವಿವಿಧ ವೇಷಧಾರಿಗಳು ಅಲ್ಲಲ್ಲೇ ಗುಂಪಾಗಿ ಮನೆ ಮನೆಗಳಿಗೆ ಸಂಚರಿಸುವ ದೃಶ್ಯ ಈ ಭಾಗದಲ್ಲಿ ಸಾಮಾನ್ಯವಾಗಿರುತ್ತದೆ. ಕೆಲವು ಗುಂಪುಗಳಲ್ಲಿ ಮಹಿಳೆಯರನ್ನು ಹೋಲುವ ವೇಷ ಧರಿಸುವ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು. ಪಾರಣಮಾನಿ ಬೇಡು ಹಬ್ಬ ಕಳೆದ ನಂತರ ಗ್ರಾಮವಾಸಿಗಳು ಕೃಷಿಚಟುವಟಿಕೆಯತ್ತ ಮುಖ ಮಾಡುತ್ತಾರೆ.
- ವರದಿ: ಈಶಾನ್ವಿ