ಸೋಮವಾರಪೇಟೆ, ಮೇ ೩೦: ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳ ಅಳವಡಿಕೆಯೊಂದಿಗೆ ಹಲವಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ಡೀನ್ ಡಾ. ಲೋಕೇಶ್ ಕರೆ ನೀಡಿದರು.
ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದೊಂದಿಗೆ ಮಾದಾಪುರ ಗ್ರಾ.ಪಂ. ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಹಾಗೂ ಅಂಗಾAಗ ದಾನ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್ ರೋಗಗಳ ತಪಾಸಣೆಯೂ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾನ್ಸರ್ ತಜ್ಞರು ಜಿಲ್ಲಾಸ್ಪತ್ರೆಗೆ ವಾರಕ್ಕೊಮ್ಮೆ ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಿಮೋಥೆರಫಿ ವ್ಯವಸ್ಥೆಯನ್ನೂ ಅಳವಡಿಸಲಾಗುವುದು. ಮೆಡಿಕಲ್ ಕಾಲೇಜಿನಲ್ಲಿಯೂ ಉತ್ತಮ ಅಧ್ಯಯನ ನಡೆಯುತ್ತಿದೆ ಎಂದರು.
ಇದರೊAದಿಗೆ ಡಯಾಲಿಸಿಸ್, ಎಂಆರ್‌ಐ ವ್ಯವಸ್ಥೆಯಿದೆ. ಸಾರ್ವಜನಿಕರು ಏನೇ ನ್ಯೂನ್ಯತೆಯಿದ್ದರೂ ಆಸ್ಪತ್ರೆಗೆ ಭೇಟಿ ನೀಡಬಹುದು. ಎಂಬಿಬಿಎಸ್, ನರ್ಸಿಂಗ್, ಪ್ಯಾರಾಮೆಡಿಕಲ್ ಕೋರ್ಸ್ಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಬಹುದು ಎಂದರು.
ಜಿಲ್ಲಾ ಸರ್ಜನ್ ಡಾ. ನಂಜುAಡಯ್ಯ ಮಾತನಾಡಿ, ದೇಶದ ಬೆಳವಣಿಗೆ ಕೇವಲ ಕಟ್ಟಡಗಳು, ಇನ್ನಿತರ ವ್ಯವಸ್ಥೆಗಳ ಮೇಲೆ ನಿಂತಿಲ್ಲ. ತಾಯಿಯ ಮರಣ ಪ್ರಮಾಣ, ಶಿಶುಮರಣ ಪ್ರಮಾಣ ಎಷ್ಟಿದೆ ಎಂಬುದರ ಮೇಲೆ ದೇಶದ ಬೆಳವಣಿಗೆ ನಿಂತಿದೆ. ಗ್ರಾಮೀಣ ಭಾಗದಲ್ಲಿರುವ ಗರ್ಭಿಣಿಯರು ಪ್ರಸವ ಪೂರ್ವ ತಪಾಸಣೆ, ದಾಖಲಾತಿ ಮಾಡಿಸಿಕೊಳ್ಳದೇ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇದು ವೈದ್ಯರಿಗೆ ಸವಾಲಿನ ಸಂದರ್ಭ. ಅಂತಹ ಪ್ರಕರಣಗಳಿದ್ದರೆ ಜಿಲ್ಲಾಸ್ಪತ್ರೆಯ ಗಮನಕ್ಕೆ ತರಬೇಕೆಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಸಾಕಷ್ಟು ಗರ್ಭಿಣಿಯರು ಇದ್ದಾರೆ. ಮುಂಚಿತವಾಗಿ ಆಸ್ಪತ್ರೆಗೆ ಆಗಮಿಸಿದರೆ ಪರೀಕ್ಷಿಸಿ ಚಿಕಿತ್ಸೆ ನೀಡುವ ಮೂಲಕ ತಾಯಿ ಮರಣ ತಪ್ಪಿಸಬಹುದು. ಇದರೊಂದಿಗೆ ಅತೀ ತೂಕ, ಕಡಿಮೆ ತೂಕದ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿಯೇ ದಾಖಲು ಮಾಡಿಕೊಂಡು ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ. ಮಕ್ಕಳನ್ನು ನೋಡಿಕೊಳ್ಳುವ ಪೋಷಕರ ದಿನದ ಸಂಬಳವನ್ನೂ ಸರ್ಕಾರವೇ ಭರಿಸಲಿದೆ. ಈ ಯೋಜನೆಯ ಪ್ರಯೋಜನದ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯವಾಗಿದೆ ಎಂದರು.
ಸಾರ್ವಜನಿಕ ರೋಗಿಗಳ ಸೇವೆಗೆ ಜಿಲ್ಲಾಸ್ಪತ್ರೆ ಸದಾ ಸಿದ್ಧವಿದೆ. ಜಿಲ್ಲಾಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ರೀತಿಯ ಸರ್ಜರಿಗಳನ್ನೂ ಮಾಡಲಾಗುತ್ತಿದೆ. ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ, ಔಷಧೋಪಚಾರ ಲಭ್ಯವಿದ್ದು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕಿ ಸವಿತಾ ರೈ ಮಾತನಾಡಿ, ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ, ಪತ್ರಕರ್ತರ ಸಂಘದಿAದ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ೪೦ಕ್ಕೂ ಅಧಿಕ ವೈದ್ಯರ ತಂಡ ಶಿಬಿರದಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ಒದಗಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ನಿರ್ದೇಶಕ ನಾಗಂಡ ಭವಿನ್, ಗ್ರಾ.ಪಂ. ಆಡಳಿತಾಧಿಕಾರಿ ಹೇಮಂತ್ ಕುಮಾರ್, ಅಭಿವೃದ್ಧಿ ಅಧಿಕಾರಿ ರವಿ ನಾಯರ್ ಅವರುಗಳು ಇದ್ದರು.
ಶಿಬಿರದಲ್ಲಿ ೩೭೩ ಮಂದಿ ಆರೋಗ್ಯ ತಪಾಸಣೆಗೆ ಒಳಪಟ್ಟರು. ೧೫ ಮಂದಿ ರಕ್ತದಾನ ಮಾಡಿದರು. ಅಂತೆಯೇ ಅಂಗಾAಗ ದಾನ ನೋಂದಣಿ, ಮಾದಾಪುರ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಲಾಯಿತು. ಸಂಘದ ನಿರ್ದೇಶಕ ವಿಜಯ್ ಹಾನಗಲ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು, ಖಜಾಂಚಿ ಬಿ.ಎ. ಭಾಸ್ಕರ್, ನಿರ್ದೇಶಕರಾದ ಹಿರಿಕರ ರವಿ, ಲಕ್ಷಿö್ಮÃಕಾಂತ್ ಕೊಮಾರಪ್ಪ, ವಿನೋದ್, ಎಸ್. ಮಹೇಶ್ ಇದ್ದರು.