ಮಡಿಕೇರಿ, ಮೇ ೩೦: ಮಡಿಕೇರಿಯ ಉದ್ಯಮಿ, ಕೊಡವ ಸಮಾಜದ ಮಾಜಿ ಅಧ್ಯಕ್ಷರಾಗಿದ್ದ ಗೌಳಿಬೀದಿ ನಿವಾಸಿ ಮಾತಂಡ ಸುರೇಶ್ ಚಂಗಪ್ಪ (೭೩) ತಾ. ೩೦ ರಂದು ಮುಂಜಾನೆ ವಿಧಿವಶರಾಗಿದ್ದಾರೆ.
ಕಳೆದ ಕೆಲಸಮಯದಿಂದ ಅನಾರೋಗ್ಯ ಸಮಸ್ಯೆ ಎದುರಿಸಿದ್ದ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದ ಇವರು ರೋಟರಿಯ ಜಿಲ್ಲಾ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸದಾ ಹಸನ್ಮುಖಿಯಾಗಿದ್ದು, ಜನಾನುರಾಗಿಯಾಗಿದ್ದ ಸುರೇಶ್ ಚಂಗಪ್ಪ ಅವರು ಮಡಿಕೇರಿಯಲ್ಲಿ ಬೆಂಗಳೂರು ಫುಡ್ ಪ್ರೊಡಕ್ಟ್ (ಬಿಎಫ್ಪಿ) ಸಂಸ್ಥೆಯನ್ನು ನಡೆಸುತ್ತಿದ್ದರು. ಈ ಹಿಂದೆ ಪದ್ಮಭೂಷಣ ಜನರಲ್ ತಿಮ್ಮಯ್ಯ ಜನ್ಮಶತಮಾನೋತ್ಸವ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆದಿದ್ದ ಸಂದರ್ಭ ರಾಷ್ಟçಪತಿ ಅಬ್ದುಲ್ ಕಲಾಂ ಅವರು ಆಗಮಿಸಿದ್ದು, ಸುರೇಶ್ ಚಂಗಪ್ಪ ಮಡಿಕೇರಿ ಕೊಡವ ಸಮಾಜದ ಪರವಾಗಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ತಲಕಾವೇರಿ-ಭಾಗಮಂಡಲ ಪುನರ್ ಪರತಿಷ್ಠಾಪನಾ ಸಮಿತಿ ಖಜಾಂಚಿಯಾಗಿ, ಕೌಂಟಿಕ್ಲಬ್ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳಲ್ಲೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಜಿಲ್ಲಾಧಿಕಾರಿ ಕಚೇರಿಯ ನಿವೃತ್ತ ಸಿಬ್ಬಂದಿ ದಮಯಂತಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೩೧ ರಂದು (ಇಂದು) ಬೆ. ೧೧.೩೦ಕ್ಕೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.