ಮಡಿಕೇರಿ, ಮೇ ೨೯: ಹಾರಂಗಿ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬರಬೇಕಿದ್ದು ರೂ.೧೩೦ ಕೋಟಿ ವೆಚ್ಚದ ಯೋಜನೆಯು ಅರೇಬರೆ ಕಾಮಗಾರಿಯಿಂದಾಗಿ ಹಲವಾರು ನಿವಾಸಿಗಳಿಗೆ ಶಾಪದಂತೆ ಪರಿಣಮಿಸುತ್ತಿದೆ.
ಹಟ್ಟಿಹೊಳೆ ಮತ್ತು ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಈ ರೂ. ೧೩೦ ಕೋಟಿ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿದ್ದು, ಮಳೆಗಾಲ ಸಮೀಪಿಸುತ್ತಿದ್ದರೂ ಪೂರ್ಣಗೊಳ್ಳದಿರುವುದರಿಂದ ಅರೆಬರೆ ಕಾಮಗಾರಿಯು ಅಪಘಾತವನ್ನು ಆಹ್ವಾನಿಸುವಂತಿದೆ.
೨೦೧೮ ಮತ್ತು ೨೦೧೯ರಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದ ಸಮಯದಲ್ಲಿ, ಹಾರಂಗಿ ಜಲಾಶಯದ ಜಲಾನಯನ ಪ್ರದೇಶಗಳಲ್ಲಿನ ಹಲವಾರು ಪ್ರದೇಶಗಳು ಭಾರಿ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾದ್ದವು. ಹಟ್ಟಿಹೊಳೆ, ಮಾದಾಪುರ, ತಂತಿಪಾಲ, ಮುಕ್ಕೋಡ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರೆ ಕುಸಿತಕ್ಕೆ ಹಲವಾರು ತೋಟಗಳು ನೆಲಕಚ್ಚಿದ್ದವು. ಈ ಸಂದರ್ಭ ಕುಸಿದು ಮಾನವ ಜೀವಹಾನಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಯೂ ನಾಶವಾಗಿತ್ತು.
ನಂತರ ಕಾಫಿ ಬೆಳೆಗಾರರೊಬ್ಬರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದರು, ಹಾರಂಗಿ ಜಲಾಶಯದಲ್ಲಿ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವಂತೆ ಮತ್ತು ಜಲಾಶಯದ ಜಲಾನಯನ ಪ್ರದೇಶಗಳನ್ನು ಬಲಪಡಿಸಲು ಯೋಜನೆ ರೂಪಿಸಲು ಇದರಲ್ಲಿ ಒತ್ತಾಯಿಸಿದ್ದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅದೇ ರೀತಿ, ಹಾರಂಗಿ ಜಲಾಶಯದ ಹೂಳು ತೆಗೆಯಲು ಮತ್ತು ಜಲಾನಯನ ಪ್ರದೇಶಗಳಲ್ಲಿ ತಡೆಗೋಡೆಗಳು, ಗೇಬಿಯನ್ ಗೋಡೆಗಳು, ಚೆಕ್ ಡ್ಯಾಮ್‌ಗಳ ನಿರ್ಮಾಣಕ್ಕಾಗಿ ರೂ. ೧೩೦ ಕೋಟಿ ಮಂಜೂರು ಮಾಡಲಾಯಿತು.
೨೦೨೩ ರಲ್ಲಿ ಈ ಸಂಬAಧ ಕಾಮಗಾರಿ ಪ್ರಾರಂಭವಾಗಿ ಜಲಾನಯನ ಪ್ರದೇಶಗಳಲ್ಲಿ ನೈಸರ್ಗಿಕ ತಡೆಗೋಡೆಗಳಾಗಿ ನಿಂತಿದ್ದ ೧೦೦ಕ್ಕೂ ಹೆಚ್ಚು ಮರಗಳನ್ನು ಗೇಬಿಯನ್ ಗೋಡೆಗಳ ನಿರ್ಮಾಣಕ್ಕಾಗಿ ನೆಲಸಮಗೊಳಿಸಲಾಯಿತು.
ಆದರೆ ಯೋಜನೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ, ಮೆಶ್ಡ್ ಗೇಬಿಯನ್ ಗೋಡೆಗಳು ಪೂರ್ಣಗೊಳ್ಳುವ ಮೊದಲೇ ಬೀಳುತ್ತಿವೆ. ಜಲಾಶಯದಾದ್ಯಂತ ಹೂಳು ತೆಗೆಯುವ ಪ್ರಕ್ರಿಯೆಗೆ ಸುಮಾರು ರೂ.೩೦ ಕೋಟಿ ಕಾಯ್ದಿರಿಸಲಾಗಿದ್ದರೂ, ಈ ಕಾರ್ಯ ಕೂಡ ನಡೆಯದಿರುವುದು ವಿಪರ್ಯಾಸ.
ತಂತಿಪಾಲ ಬಳಿಯ ಸೇತುವೆಗೆ ಅರೆಬರೆ ಕಾಮಗಾರಿಯಿಂದ ಹಾನಿ ಉಂಟಾಗಿದ್ದು, ಸೇತುವೆಯ ಕೆಳಗೆ ಅವೈಜ್ಞಾನಿಕವಾಗಿ ಕಲ್ಲುಗಳು ಮತ್ತು ಮಣ್ಣನ್ನು ತುಂಬಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
“ಹಾರಂಗಿಯನ್ನು ಸೇರುವ ಹಟ್ಟಿಹೊಳೆ ಮತ್ತು ನಂದಿಮೊಟ್ಟೆ ನದಿಗಳ ದಡಗಳನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತ ಸಂಭವ ಹೆಚ್ಚಾಗಿದೆ.
ನದಿಯ ನೀರಿನ ಮಾರ್ಗವೂ ಸಹ ಈ ಕಾಮಗಾರಿಯಿಂದಾಗಿ ಚಿಕ್ಕದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಮಳೆಗಾಲದಲ್ಲಿ ನಿರಂತರ ಮಳೆಯಾದರೆ, ಇಲ್ಲಿನ ನಿವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬAತಿದೆ.
- ಪ್ರಜ್ಞ ಜಿ.ಆರ್.