ಸುಂಟಿಕೊಪ್ಪ, ಮೇ ೨೯: ಒಂದು ಕಾಲದಲ್ಲಿ ಕೊಡಗು ಸಂಸ್ಥಾನವಾಗಿದ್ದ ಬಳಿಕ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ನಂತರ ಕೊಡಗು ರಾಜ್ಯವಾಗಿ ಈಗ ಕರ್ನಾಟಕದ ಮೋಹಕ ಜಿಲ್ಲೆಯಾಗಿರುವ ಕೊಡಗಿಗೆ ಬೇರೆಯದೇ ರೀತಿಯ ಸಾಂಸ್ಕೃತಿಕ ನೀತಿ ಹಾಗೂ ಶೈಕ್ಷಣಿಕ ಭಾಷಾ ಸೂತ್ರ ಬೇಕಾಗಿದೆ ಎಂದು ಸುಂಟಿಕೊಪ್ಪದ ಎಸ್‌ಎಸ್ ಇಂಟರ್ ನ್ಯಾಷನಲ್‌ನ ಹಾಲ್‌ನ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆದ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಅಬ್ದುಲ್ ರಶೀದ್ ಹೇಳಿದರು.

ಸಮಾರಂಭದಲ್ಲಿ ಅಧ್ಯಕ್ಷರ ಭಾಷಣ ಮಾಡಿದ ಅವರು, ಕೊಡವ, ಅರೆಭಾಷೆ, ಜೇನುಕುರುಬ, ಬೆಟ್ಟಕುರುಬ, ಎರವ, ಮೇದ, ಅಡಿಯ, ಪಣಿಯ, ದೇವಸೋಲಿಗ, ಜೇನುಮಲೆ, ಕುಡಿಯ, ಪೂಮಲೆ ಕುಡಿಯ ಇತ್ಯಾದಿ ಭಾಷೆಗಳನ್ನು ಕೊಡಗಿನಲ್ಲಿ ಅಲ್ಲದೆ ಬೇರೆಲ್ಲೂ ಬಳಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಕಲಿಕೆಯ ಮಾಧ್ಯಮವಾಗಿ ಈ ಭಾಷೆಗಳನ್ನು ಬಳಸುವುದು ಅಸಾಧ್ಯವಾದ ವಿಷಯ. ಆದರೆ ಈ ಭಾಷೆಗಳನ್ನು ಬಳಸುವ ಸಮುದಾಯದ ಮಕ್ಕಳಲ್ಲಿ ಈ ಭಾಷೆಗಳ ಕುರಿತ ಕುತೂಹಲ ಆಸಕ್ತಿ ಮತ್ತು ಹೆಮ್ಮೆಯನ್ನು ಮೂಡಿಸುವ ಕೆಲಸವಾಗಬೇಕು.

ಕೊಡಗಿನ ಶಾಲೆಗಳಲ್ಲಿ ಅದರಲ್ಲೂ ಆದಿವಾಸಿ ಮಕ್ಕಳು ಕಲಿಯುವ ಅಶ್ರಮ ಶಾಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಈ ಭಾಷೆಗಳ ಕುರಿತ ಮಾಹಿತಿ ಮತ್ತು ಕಲಿಕೆ ಕೊಡಿಸಬೇಕು. ಕನ್ನಡ ಭಾಷೆ ಇಷ್ಟು ಶ್ರೀಮಂತವಾಗಿ ಬೆಳೆಯಲು ಕಾರಣ ಕರ್ನಾಟಕದ ತುಂಬ ತುಂಬಿಕೊAಡಿರುವ ಇಂತಹ ಸಣ್ಣಪುಟ್ಟ ಭಾಷೆಗಳು. ಕೊಡಗಿನಲ್ಲಿ ಕನ್ನಡ ಉಳಿಸುವುದೆಂದರೆ ಇಲ್ಲಿನ ಈ ಸಣ್ಣಪುಟ್ಟ ಭಾಷೆಗಳನ್ನು ಉಳಿಸುವುದು. ಈ ಸಣ್ಣಪುಟ್ಟ ಭಾಷೆಗಳನ್ನು ಉಳಿಸುವುದೆಂದರೆ ಅಳಿವಿನ ಅಂಚಿನಲ್ಲಿರುವ ಈ ಭಾಷೆಗಳನ್ನಾಡುವ ಜನರ ಜೀವಗಳನ್ನು ಕಾಪಾಡುವುದು.

ನಾವು ಪ್ರಪಂಚದ ಇತರ ದೇಶಗಳಲ್ಲಿ ಮುಖ್ಯವಾಗಿ ಆಸ್ಟೆçÃಲಿಯಾ, ನ್ಯೂಜಿಲೆಂಡ್, ಕೆನಡಾ ಮತ್ತು ಅಮೇರಿಕಾಗಳಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇಂತಹ ನಿಲುವನ್ನು ಕಾಣಬಹುದು. ಹಸಿವು, ಕುಡಿತ ಮತ್ತು ಅನಾರೋಗ್ಯಗಳ ಸುಳಿಯಲ್ಲಿ ಸಿಲುಕಿ ಅಳಿವಿನತ್ತ ಸಾಗುತ್ತಿರುವ ಮೂಲನಿವಾಸಿಗಳ ಹಿತವನ್ನು ಈ ದೇಶಗಳು ತಮ್ಮ ಮೊದಲ ಆದ್ಯತೆಯನ್ನಾಗಿ ಪರಿಗಣಿಸುತ್ತವೆ. ಇವರ ಆಡುನುಡಿಯ ಆರೈಕೆಗಾಗಿ ನೀತಿ ನಿಯಮಾವಳಿಗಳನ್ನು ರೂಪಿಸಿವೆ. ಕೊಡಗಿನ ಜನಪ್ರತಿನಿಧಿಗಳು ಮತ್ತು ಜವಾಬ್ದಾರಿ ಸ್ಥಾನದಲ್ಲಿರುವವರು ಈ ಕುರಿತು ಯೋಚಿಸಿ ಕೊಡಗು ಕೇಂದ್ರೀಕೃತವಾದ ಮಾದರಿ ಸೂತ್ರಗಳನ್ನು ರೂಪಿಸಬೇಕೆಂದು ಅವರು ಕೋರಿದರು.

ಈ ಮೂಲಕ ಅಳಿವಿನತ್ತ ಸಾಗುತ್ತಿರುವ ಈ ಭಾಷಾ ವೈವಿಧ್ಯ ಪ್ರದೇಶದ ಮಾತು ಹಾಡು ಕುಣಿತ ಬಡಿತಗಳನ್ನು ಈ ಜನಾಂಗಗಳ ಮಕ್ಕಳ ನಾಲಿಗೆಯಲ್ಲಿ ನಲಿಯುವಂತೆ ಮಾಡಬೇಕು. ಆಧುನಿಕ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಈ ಅಪರೂಪದ ಕಲಾ ಮಾಧ್ಯಮಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಪ್ರಚುರಪಡಿಸುವ ಕೆಲಸ ಮಾಡಬಹುದಾಗಿದೆ ಎಂದು ರಶೀದ್ ನುಡಿದರು.

ಮಕ್ಕಳಿಗೆ ಸಾಹಿತ್ಯ ಕೃತಿಗಳ£ನ್ನೂ ನೀಡಿ

ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಕೊಡುವುದರ ಜೊತೆಗೆ ಒಳ್ಳೆಯ ಸಾಹಿತ್ಯ ಕೃತಿಗಳನ್ನು ನೀಡುವಂತಾಗಬೇಕು. ಶಾಲೆಯಲ್ಲಿ ಅಧ್ಯಾಪಕರಿಗೆ ಮಕ್ಕಳನ್ನು ಓದಿಸುವುದರ ಜೊತೆಯಲ್ಲೇ ಮಕ್ಕಳಿಂದ ಕನ್ನಡದಲ್ಲಿ ಬರೆಸುವ ಕೆಲಸವನ್ನೂ ಯಾಕೆ ಒದಿಗಸಬಾರದು? ಎಂದು ಪ್ರಶ್ನಿಸಿದ್ದ ಅಬ್ದುಲ್ ರಶೀದ್ ಸಮೀಕ್ಷೆ, ಸರ್ವೆ, ಜನಗಣತಿ ಡಾಟಾ ಫಾರಂಗಳನ್ನು ತುಂಬಿಸುವಷ್ಟೆ ದೊಡ್ಡ ಕೆಲಸ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಓದುವ ಅಭಿರುಚಿ ಬೆಳೆಸುವುದಾಗಿದೆ. ಒಳ್ಳೆಯ ಓದಿನ ರುಚಿ ಹತ್ತಿಸಿಕೊಂಡ ಮಕ್ಕಳು ಬೆಳೆದಾಗ ಒಳ್ಳೆಯ ಮನುಷ್ಯರಾಗುತ್ತಾರೆ. ಬೇರೆ ಏನನ್ನೂ ಓದದೇ ಕೇವಲ ಪಠ್ಯ ಗೈಡ್ ಟ್ಯೂಷನ್‌ಗಳಲ್ಲಿ ಮುಳುಗಿದ ಮಕ್ಕಳು ಸಂಕುಚಿತರಾಗಿರುತ್ತಾರೆ. ಇಂತಹ ಮಕ್ಕಳನ್ನು ಮತಾಂಧರೂ ಕೋಮುವಾದಿಗಳೂ ಜಿಹಾದಿಷ್ಟರೂ ಭಾಷಾಂಧರೂ ಯಾಮಾರಿಸಿ, ಅವರ ಮಿದುಳನ್ನು ಅಪಹರಿಸಿ ಮನುಷ್ಯ ದ್ವೇಷಿಗಳನ್ನಾಗಿ ಮಾಡುತ್ತಾರೆ. ಕೋಮುವಾದ ವಿರುದ್ಧ ಮತಾಂಧತೆಯ ವಿರುದ್ಧ, ರಾಷ್ಟçದ್ರೋಹಿಗಳ ವಿರುದ್ಧ, ಮಾದಕವ್ಯಸನದ ವಿರುದ್ಧ ಜಿಹಾದಿಷ್ಟರ ವಿರುದ್ಧದ ಕಾರ್ಯಾಚರಣೆಗೆ ಬಳಸುವ ಕೋಟ್ಯಾಂತರ ಬಜೆಟ್ಟಿನ ಒಂದು ಸಣ್ಣ ಮೊತ್ತವನ್ನು ಸರಕಾರಿ ಶಾಲೆಗಳಲ್ಲಿ ಓದುವ ಬರೆಯುವ ಚಟುವಟಿಕೆಗಳಿಗೆ ಬಳಸಿದರೆ ಪರಿಣಾಮಕಾರಿ ಮತ್ತು ಮನೋಹರವಾಗಿರುತ್ತದೆ ಎಂದರು.

ವಿಲಾಸಿ ಪ್ರವಾಸಿಗರ ದಾಳಿ

ಕೊಡಗು ಇದೀಗ ವಿಲಾಸಿ ಪ್ರವಾಸಿಗರ ದಾಳಿಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ. ಈ ನೆಲದ ಮಣ್ಣು, ಈ ನೆಲದ ಗಾಳಿ, ಇಲ್ಲಿರುವ ಗುಡಿಗಳು ಭಗವತಿ, ಈಶ್ವರ, ಅಯ್ಯಪ್ಪ, ಕೊರತಿ ಚಾಮುಂಡಿ ದೇವರ ಕಲ್ಲುಗಳು, ದೇವಡ ಕಾಡುಗಳು ಈ ಯಾವುದರ ಅರಿವೂ ಇಲ್ಲದ ವಿಲಾಸಿ ಪ್ರವಾಸಿಗರ ತಂಡ ಕೊಡಗಿನ ಮೌನ ಹಸಿರು ಮತ್ತು ಘನತೆಗಳಿಗೆ ಕ್ಯಾರೇ ಅನ್ನದೆ ದಾಂಧಲೆ ಎಬ್ಬಿಸುತ್ತಿದೆ. ಪ್ರವಾಸೋದ್ಯಮ ಮತ್ತು ಆದಾಯದ ನೆಪದಲ್ಲಿ ಕೊಡಗಿನ ನೆಮ್ಮದಿ ಹಾಳಾಗುತ್ತಿದೆ. ರೆಸಾರ್ಟ್ಗಳು, ರಿಯಲ್ ಎಸ್ಟೇಟ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ವಿಲಾಸಿ ಪ್ರವಾಸಿಗಳ ನಿಯಂತ್ರಣಕ್ಕೆ ಸರಕಾರ ನೀತಿ ರೂಪಿಸಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷರು ನುಡಿದರು.

ಸಾಹಿತ್ಯದ ಕೆಲಸ ಅರಳಿಸುವುದೇ

ಇತಿಹಾಸದಲ್ಲಿ ಮನುಷ್ಯ ಕುಲದ ಇದುವರೆಗಿನ ಆಯಸ್ಸು ಬಹಳ ಅಲ್ಪ. ಅದರಲ್ಲೂ ನಾವು ಬದುಕುವುದು ಬೃಹತ್ ಇತಿಹಾಸಕ್ಕೆ ಹೋಲಿಸಿದರೆ ಕೆಲವು ಮಿಲಿ ಸೆಕೆಂಡ್‌ಗಳು ಮಾತ್ರ ಸಾಹುಕಾರರಾದರೂ, ರೈಟರುಗಳಾದರೂ, ಸಾಹಿತಿಗಳಾದರೂ, ಮಂತ್ರಿಯಾದರೂ ಇಷ್ಟೇ. ಆದರೂ ಈ ಸಣ್ಣ ಮಿಲಿ ಸೆಕೆಂಡಿನಲ್ಲಿ ನಾವು ಜಾತಿಯ ಹೆಸರಿನಲ್ಲಿ ಭಾಷೆಯ ಹೆಸರಿನಲ್ಲಿ ಬಡವ ಶ್ರೀಮಂತ ಸಾಹುಕಾರರು ಕೂಲಿಯಾಳುಗಳು ಎಂಬ ಹೆಸರಿನಲ್ಲಿ ಇನ್ನೊಬ್ಬರನ್ನು ಹೊಸಕಿ ಹಾಕಲು ನೋಡುತ್ತೇವೆ. ಇನ್ನೊಬ್ಬರ ನಾಗರಿಕತೆಯನ್ನೇ ಹೊಸಕಿ ಬಿಡುತ್ತೇವೆ ಎಂದು ಹೂಂಕರಿಸುತ್ತೇವೆ. ಆದರೆ ಸಾಹಿತ್ಯದ ಕೆಲಸ ಹೊಸಕುವುದಲ್ಲ. ಅರಳಿಸುವುದು. ತೃಣದಲ್ಲೂ ಗಹನವಾದುದನ್ನು ಕಾಣುವುದು ಮತ್ತು ಅದನ್ನು ಉಳಿದವರಿಗೆ ಕಾಣಿಸುವುದು. ಸಾಹಿತ್ಯ ಸಮ್ಮೇಳನದ ಉದ್ದೇಶವೂ ಅಷ್ಟೇ ಎಂದು ಅಬ್ದುಲ್ ರಶೀದ್ ಅಭಿಪ್ರಾಯ ವ್ಯಕ್ತಪಡಿಸಿದರು.