ಶನಿವಾರಸಂತೆ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮೀಯ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯಿತು. ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಹಾಗೂ ಮದೀನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಸಮುದಾಯದವರು ಒಟ್ಟಾಗಿ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡರು. ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮಗುರು ಅಬ್ದುಲ್ಲಾ ಧಾರ್ಮಿಕ ಪ್ರವಚನ ನೀಡಿದರು. ಜಾಮೀಯ ಮಸೀದಿ ಹಾಗೂ ಮದೀನ ಮಸೀದಿಯ ಧರ್ಮಗುರುಗಳು ಮತ್ತು ಆಡಳಿತ ಮಂಡಳಿಗಳ ಪದಾಧಿಕಾರಿಗಳು ಹಾಜರಿದ್ದರು. ಮಾದಾಪುರ: ಮಾದಾಪುರದ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಸಡಗರದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಬಕ್ರೀದ್ನ ಪ್ರಾರ್ಥನೆಗಳಿಗೆ ನೇತೃತ್ವ ವಹಿಸಿದ್ದ ಖತೀಬರಾದ ಶಾಫಿ ಸಅದಿ ಅವರು ಮಾತನಾಡಿ, ಯುದ್ಧದಿಂದ ದೇಶವು ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಕ್ಕೆ ಸಿಲುಕಿದ್ದು ಎಲ್ಲಾ ಸಮಸ್ಯೆಗಳು ನೀಗಿ ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಸಿಗಲಿ ಎಂದು ಹಾರೈಸಿದರು. ಪ್ರಾರ್ಥನೆಯ ನಂತರ ಮೆರವಣಿಗೆ ಮೂಲಕ ಖಬರ್ ಸ್ಥಾನಕ್ಕೆ ತೆರಳಿ ಮರಣ ಹೊಂದಿದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಜಮಾಅತ್ ಅಧ್ಯಕ್ಷರಾದ ಅಕ್ಬರ್ ಎ.ಪಿ,ಕಾರ್ಯದರ್ಶಿ ಅಬ್ದುಲ್ ಮಜೀದ್, ಕೋಶಾಧಿಕಾರಿ ಮಹಮ್ಮದ್ ಅಲಿ ಸೇರಿದಂತೆ ಆಡಳಿತ ಸಮಿತಿಯ ಸದಸ್ಯರು ಇದ್ದರು.ಕಡಂಗ: ಕಡಂಗದಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರಾರ್ಥನೆಗೆ ಸ್ವಾದಿಕ್ ಸಖಾಫಿ ನೇತೃತ್ವ ವಹಿಸಿದ್ದರು.
ಬಳಿಕ ಕೊಕ್ಕಂಡ ಬಾಣೆ ದರ್ಗಾಕ್ಕೆ ತೆರಳಿ ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಜಮಾಅತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು. ಮೊಹೀಯದ್ದಿನ್ ಜುಮಾ ಮಸೀದಿಯಲ್ಲಿ ನಮಾಝ್ಗೆ ಇರ್ಷಾದ್ ಮನ್ನಾನಿ ನೇತೃತ್ವ ವಹಿಸಿದ್ದರು. ಚೆಟ್ಟಳ್ಳಿ : ಬಕ್ರೀದ್ ಹಬ್ಬವನ್ನು ಕಂಡಕರೆ ಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ನಮಾಜ್ಗೆ ಮಹಲ್ ಖತೀಬರಾದ ಸೂಫಿಯಾನ್ ಸಹದಿ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು, ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾತ್ರ ಸುಂದರವಾದ ಶಾಂತಿಯುತ ಸಮಾಜವನ್ನು ಕಟ್ಟಲು ಸಾಧ್ಯ. ಆದ್ದರಿಂದ ಎಲ್ಲರೂ, ದ್ವೇಷ, ಅಸೂಯೆ ಮರೆತು ಒಗ್ಗೂಡಿ ಜೀವನ ನಡೆಸಬೇಕೆಂದು ಕರೆಯಿತ್ತರು. ಈ ಸಂದರ್ಭ ಸೈಫುದ್ದೀನ್ ಸಖಾಫಿ, ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ, ಪ್ರಧಾನ ಕಾರ್ಯದರ್ಶಿ ಪಿ.ಎಂ ಅಲಿ, ಉಪಾಧ್ಯಕ್ಷ ಪಿ.ಎಚ್ ಗಫೂರ್, ಸಹ ಕಾರ್ಯದರ್ಶಿ ಮನ್ಸೂರ್, ಖಜಾಂಜಿ ಹಾರಿಸ್, ಸ್ವಲಾತ್ ಕಮಿಟಿ ಅಧ್ಯಕ್ಷ ಪಿ.ಎ ಹುಸೇನ್ ಮತ್ತಿತರರು ಇದ್ದರು.
ನಾಪೋಕ್ಲು: ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ 'ಈದುಲ್ ಅಝ್ಹಾ' (ಬಕ್ರೀದ್) ಹಬ್ಬವನ್ನು ನಾಪೋಕ್ಲು , ಹಳೆತಾಲೂಕು , ಎಮ್ಮೆಮಾಡು , ಕುಂಜಿಲ, ಕೊಳಕೇರಿ , ಕಿಕ್ಕರೆ , ಕೊಟ್ಟಮುಡಿ , ಚೆರಿಯಪರಂಬು ಸೇರಿದಂತೆ ಇನ್ನಿತರ ಮಸೀದಿಯಲ್ಲಿ ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಸಮೀಪದ ಹಳೆತಾಲೂಕು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಖಾಲಿದ್ ಹಿಮಾಮಿ. ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬಳಿಕ ಈದ್ ಸಂದೇಶ ಭಾಷಣ ನೀಡಿದ ಅವರು, ಪ್ರವಾದಿ ಇಬ್ರಾಹೀಂ (ಅ) ಅವರ ನಿಷ್ಕಲ್ಮಶ ತ್ಯಾಗ ಮತ್ತು ದೇವರ ಮೇಲಿನ ದೃಢವಾದ ನಂಬಿಕೆಯನ್ನು ಸ್ಮರಿಸುತ್ತಾ, ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ಸಹನೆ ಮತ್ತು ಪರಸ್ಪರ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷ ಪಿ.ಎ. ಮಹಮ್ಮದ್ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಸ್ಥಳೀಯ ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬರಾದ ಶೌಕತ್ ಸಖಾಫಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಹಿತವಚನವನ್ನಾಡಿದರು. ಈ ಸಂದರ್ಭ ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷ ಎಮ್.ಎಚ್. ಅಬ್ದುಲ್ ರೆಹಮಾನ್ , ಕಾರ್ಯದರ್ಶಿ ಯೂನಸ್ ಪಿ ಎಂ , ಉಪಾಧ್ಯಕ್ಷ ಅರಫತ್, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು. ನಮಾಝ್ ಮುಕ್ತಾಯಗೊಂಡ ಬಳಿಕ ಪರಸ್ಪರ ಆಲಂಗಿಸಿಕೊAಡು ಹಸ್ತಲಾಘವ ಮಾಡುವ ಮೂಲಕ 'ಈದ್ ಮುಬಾರಕ್' ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಖಬರಸ್ಥಾನ ಮತ್ತು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಹಿರಿಯರಿಗೆ ಮತ್ತು ನಾಡಿನ ಒಳಿತಿಗಾಗಿ, ಸಮೃದ್ಧಿಗಾಗಿ ಹಾಗೂ ವಿಶ್ವ ಶಾಂತಿಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ಹಬ್ಬದ ಸಾರ್ಥಕತೆಯನ್ನು ಮೆರೆದರು.ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಂ ಸಮುದಾಯದವರು ತ್ಯಾಗ, ಸಮಾನತೆ, ಸಹಬಾಳ್ವೆಯ ಸಂಕೇತವಾದ ಬಕ್ರೀದ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಆಲಂಗಿಸಿಕೊAಡು ಶುಭಾಶಯ ವಿನಿಮಯಗೊಳಿಸುವುದರೊಂದಿಗೆ ಸಡಗರ ಸಂಭ್ರಮದಿAದ ಹಬ್ಬವನ್ನು ಆಚರಿಸಿಕೊಂಡರು.
ಸುAಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜಮಾಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಸುನ್ನಿ ಶಾಫಿ ಜುಮಾ ಮಸ್ಜಿದ್, ಕೂಬ್ಬ ಮಸ್ಜಿದ್, ಗದ್ದೆಹಳ್ಳದ ನೂರ್ ಜಮಾಮಸ್ಜಿದ್ನಲ್ಲಿ ಧಾರ್ಮಿಕ ಪ್ರವಚನ, ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಗದ್ದೆಹಳ್ಳದ ಈದ್ಗಾಗೆ ತೆರಳಿ ಕುಟುಂಬದಲ್ಲಿ ಮೃತರಾದವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕುಟುಂಬದವರೊAದಿಗೆ ಹಬ್ಬಆಚರಣೆ ಮತ್ತು ಸಡಗರದಲ್ಲಿ ತೊಡಗಿಸಿಕೊಂಡರು.
ಸಲಫಿ ಮಸೀದಿಯಲ್ಲಿ ನಿಶಾದ್ ಸ್ವಲಾಹಿ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳು ನೆರೆದು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದ್ದರು. ಐಗೂರು: ಹೊಸತೋಟದ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಪ್ರಧಾನ ಕಾರ್ಯದರ್ಶಿ ಸಲೀಂ ಹೊಸತೋಟ, ಖತೀಬರಾದ ಶಬೀರ್ ಆಲಿ ನೂರಾನಿ ಹಾಗೂ ಸಮುದಾಯದವರು ಭಾಗವಹಿಸಿದ್ದರು.ಸಿದ್ದಾಪುರ : ಸಿದ್ದಾಪುರ ಸುತ್ತಮುತ್ತಲಿನಲ್ಲಿ ಬಕ್ರೀದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಸಿದ್ದಾಪುರದ ಜುಮಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಹಬ್ಬದ ಶುಭಾಶಯಗಳನ್ನು ಪರಸ್ಪರ ಹಂಚಿಕೊAಡರು.
ಈ ಸಂದರ್ಭ ಸಿದ್ದಾಪುರ ಜುಮಾ ಮಸೀದಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹಾಜರಿದ್ದರು.ಕೂಡಿಗೆ: ಕೂಡಿಗೆಯ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆ ನೆರವೇರಿತು. ಈ ಸಂದರ್ಭ ಅಧ್ಯಕ್ಷ ಅಜೀಜ್, ಕಾರ್ಯದರ್ಶಿ ನೌಫಲ್ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಹಾಜರಿದ್ದರು.