ವೀರಾಜಪೇಟೆ, ಮೇ ೨೯: ಅರಣ್ಯ ಇಲಾಖೆ, ಮಹಿಳಾ ಸಮಾಜದ ಸಹಕಾರದೊಂದಿಗೆ ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು.
ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರೈತರಿಗೆ, ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಅಣಬೆ ಬೇಸಾಯ ಕುರಿತು ತರಬೇತಿ ಕಾರ್ಯಾಗಾರವನ್ನು ಅರಣ್ಯ ಇಲಾಖೆಯಿಂದ ನಡೆಸಲಾಗುತ್ತಿದೆ. ಅಣಬೆ ಕೃಷಿಯ ಪ್ರಾಮುಖ್ಯ ಮತ್ತು ಅಣಬೆಯ ವಿವಿದ ಮೌಲ್ಯವರ್ಧಿತ ಪದಾರ್ಥಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಅಣಬೆಯಲ್ಲಿರುವ ಅವಶ್ಯಕ ಪೋಷಕಾಂಶಗಳು, ವಾಣಿಜ್ಯ ಉದ್ದೇಶದಿಂದ ಅಣಬೆ ಬೇಸಾಯವನ್ನು ಮಾಡುವುದರಿಂದ ಆಗುವ ಆರ್ಥಿಕ ಆದಾಯಗಳ ಬಗ್ಗೆ ತಿಳಿಸಲಾಗುತ್ತದೆ. ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಕೃಷಿ ಇದಾಗಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ಈ ಕೃಷಿಯನ್ನು ಮುಂದುವರೆಸಬಹುದು. ಅರಣ್ಯ ಇಲಾಖೆ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಅರಣ್ಯದಂಚಿನಲ್ಲಿ ವಾಸಿಸುತ್ತಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಂದು ಮಾಹಿತಿ ನೀಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಮಾತನಾಡಿ, ಅಣಬೆ ತರಬೇತಿ ಕಾರ್ಯಕ್ರಮ ಬಹಳ ಉಪಯುಕ್ತವಾಗಿದ್ದು, ಮಹಿಳೆಯರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಮಹಿಳೆಯರು ಬಿಡುವಿನ ವೇಳೆಯಲ್ಲಿ ಈ ವಿಧದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಆದಾಯ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿ ಕಾರ್ಯಾಗಾರಗಳು ನಡೆಯಲಿ ಎಂದು ಆಶಿಸಿದರು.
ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ತಹಸೀನಾ ಮಾತನಾಡಿ, ಅಣಬೆ ಕೃಷಿಯಿಂದ ಮಹಿಳೆಯರು ಉತ್ತಮ ಆದಾಯವನ್ನು ಪಡೆಯುವುದರೊಂದಿಗೆ ತಮ್ಮ ಜೀವನ ನಿರ್ವಹಣೆ ಮಾಡಬಹುದು. ಅಣಬೆ ಕೃಷಿ ಮಾಡುವುದರತ್ತ ಗಮನ ಹರಿಸಬೇಕು. ಮಹಿಳೆಯರು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಇದರಿಂದ ಗಳಿಸಬಹುದು. ಅಲ್ಲದೆ ಅಣಬೆಯನ್ನು ಪದಾರ್ಥವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳಿತಾಗಲಿದೆ. ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದರು.
ಸAಪನ್ಮೂಲ ವ್ಯಕ್ತಿ ಹರಿಣಿ ಪ್ರಭಾಕರ್ ಮಾತನಾಡಿ, ಅಣಬೆಯ ನಾನಾ ರೀತಿಯ ಬೇಸಾಯ ಕ್ರಮಗಳು ಮತ್ತು ನಿರ್ವಹಣೆ, ಅಣಬೆಗೆ ತಗುಲುವ ಸಾಮಾನ್ಯ ರೋಗ ಮತ್ತು ಕೀಟಗಳು, ಅಣಬೆ ಬೇಸಾಯ ಮಾಡುವ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಶಿಬಿರಾರ್ಥಿಗಳಿಗೆ ವಿವರಿಸಿದರು. ಅಣಬೆ ಕೃಷಿಗೆ ವಿವಿಧ ರೀತಿಯ ಪ್ರಕ್ರಿಯೆಗಳನ್ನು ಹಂಚಿಕೊAಡರು ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಮಾಹಿತಿ ಒದಗಿಸಿದರು.
ಅರಣ್ಯ ಯೋಜನೆ ಮತ್ತು ನಿರ್ವಹಣೆಯ ಜಂಟಿ ವ್ಯಕ್ತಿ ಗೋವಿಂದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳಾದ ಶಿವರಾಂ ಕೆ.ವಿ. ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.