ಮಡಿಕೇರಿ, ಮೇ ೨೮: ೨ ತಿಂಗಳ ಬೇಸಿಗೆ ರಜೆಯ ಬಳಿಕ ರಾಜ್ಯಾದ್ಯಂತ ತಾ. ೨೯ ರಂದು (ಇಂದು) ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢಶಾಲೆಗಳು ಪ್ರಾರಂಭವಾಗಲಿದ್ದು, ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರುಗಳ ಹಾಜರಾತಿ ದಾಖಲಾತಿ ಸಂಪೂರ್ಣ ಡಿಜಿಟಲೀ ಕರಣಗೊಳ್ಳಲಿದೆ. ಪುಸ್ತಕದಲ್ಲಿನ ಸಾಂಪ್ರದಾಯಿಕ ಹಾಜರಾತಿ ದಾಖಲು ಇನ್ನು ಮುಂದೆ ಕೇವಲ ವಿದ್ಯಾರ್ಥಿಗಳ ಹಾಜರಾತಿಗಷ್ಟೆ ಶಿಕ್ಷಕರು ಬಳಸಲಿದ್ದು, ವಿದ್ಯೆ ಕಲಿಸುವ ಶಿಕ್ಷಕರು ಆಧುನಿಕ ತಂತ್ರಜ್ಞಾನ ಬಳಸಿ ಜಿ.ಪಿ.ಎಸ್ ಆಧಾರಿತ ಆ್ಯಪ್ ಮೂಲಕವೇ ತಮ್ಮ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ.
ಕರ್ನಾಟಕ ಎಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆ್ಯಪ್ ಮೂಲಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಡಿಜಿಟಲ್ ಹಾಜರಾತಿಯನ್ನು ಜಾರಿಗೆ ತಂದದ್ದು, ಕೊಡಗು ಸೇರಿದಂತೆ ರಾಜ್ಯಾದ್ಯಂತ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆ, ಪ್ರೌಢಶಾಲೆಗಳ ಶಿಕ್ಷಕರು ಈ ಕ್ರಮವನ್ನೇ ಬಳಸಿ ತಮ್ಮ ಹಾಜರಾತಿಯನ್ನು ಕಡ್ಡಾಯ ದಾಖಲಿಸಬೇಕಿದೆ.
ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಕ್ಯಾಮ್ಸ್ (ಕರ್ನಾಟಕ ಎಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಆ್ಯಪ್ಅನ್ನು ಶಿಕ್ಷಕರು ಡೌನಲೋಡ್ ಮಾಡಿಕೊಳ್ಳಬೇಕು. ಆಯಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಶಾಲೆಗಳ ಜಿ.ಪಿ.ಎಸ್ ಸ್ಥಳ ಹಾಗೂ ಶಿಕ್ಷಕರ ಮಾಹಿತಿ ಆ್ಯಪ್ನಲ್ಲಿ ಇರುವುದರಿಂದ ಶಾಲಾವರಣದಲ್ಲಿದ್ದರೆ ಮಾತ್ರ ಶಿಕ್ಷಕರು ತಮ್ಮ ಹಾಜರಾತಿಯನ್ನು ದಾಖಲಿಸಬಹುದು. ಶಾಲೆಯಿಂದ ವಾಪಸ್ಸು ಹಿಂತಿರುಗುವಾಗಲೂ ಹಾಜರಾತಿ ದಾಖಲಿಸಬೇಕು.೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹಾಜರಾತಿ ಸಮಯ ಆ್ಯಪ್ನಲ್ಲೇ ಸ್ವಯಂ ದಾಖಲಾಗುತ್ತದೆ. ಶಾಲಾವರಣದ ೧೦೦ ಮೀಟರ್ ಸುತ್ತಲು ಮಾತ್ರ ದಾಖಲಿಗೆ ಅವಕಾಶವಿದೆ.
ದಾಖಲಾತಿಯ ಸಂಪೂರ್ಣ ವಿವರ ಮಾಸಿಕವಾಗಿ ಬಿ.ಇ.ಒ ಗಳ ಮೂಲಕ ಡಿ.ಡಿ.ಪಿ.ಐಗೆ ಸಲ್ಲಿಕೆಯಾಗಲಿದೆ. ರಾಜ್ಯಾದ್ಯಂತ
ಎಲ್ಲಾ ಶಿಕ್ಷಕರ ಹಾಜರಾತಿ ವಿವರ ಒಂದೇ ಕಡೆ ಲಭ್ಯವಾಗಲಿದೆ.