ಮುಳ್ಳೂರು, ಮೇ ೨೭: ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಯುವ ಘಟಕದ ವತಿಯಿಂದ ಜೂ. ೧೩ ರಂದು ಗುಡುಗಳಲೆ ಜಾತ್ರಾ ಮೈದಾನದಲ್ಲಿ ಬಸವೇಶ್ವರ ಜಯಂತಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಜಯಂತಿ ರೇಣುಕಾಚಾರ್ಯರ ಜಯಂತಿ ಮತ್ತು ಕೊಡಗು ರಾಜರ ಸಂಸ್ಮರಣೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.
ಸಮೀಪದ ಶನಿವಾರಸಂತೆ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠದ ಪೂಜ್ಯರ ಜೊತೆಯಲ್ಲಿ ವೀರಶೈವ ಸಮಾಜದ ರಾಷ್ಟç ಅಧ್ಯಕ್ಷ ಈಶ್ವರ ಖಂಡ್ರೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಉದ್ಘಾಟಿಸಲಿದ್ದಾರೆ ಎಂದರು.
ಕೊಡಗು ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಮತ್ತು ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಜೂ೧೩ ರಂದು ಗುಡುಗಳಲೆಯಲ್ಲಿ ಕೊಡಗು ಜಿಲ್ಲಾ ಮಠದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ಸಮಾಜದ ಎಲ್ಲಾ ಹಿರಿಯ ಕಿರಿಯ ಮುಖಂಡರ ಸಹಕಾರದಿಂದ ಪ್ರತಿಭಾ ಪುರಸ್ಕಾರ ನೀಡುವಂತಹ ಅದ್ಭುತ ಕಾರ್ಯಕ್ರಮ ಇದಾಗಿದ್ದು ಸಮಾಜದ ಸಮಾರು ೫ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.
ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ವೀರಶೈವ ಮಹಾಸಭಾ ಯುವ ಘಟಕದ ಕೊಡಗು ಜಿಲ್ಲಾಧ್ಯಕ್ಷ ಮೋಕ್ಷಿಕ್ ರಾಜ್ ಮಾತನಾಡಿದರು. ಗೋಷ್ಠಿಯಲ್ಲಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಿತಿನ್, ಕಾರ್ಯದರ್ಶಿಗಳಾದ ಶಿವಾನಂದ್, ಸೋಹನ್, ಖಜಾಂಜಿ ಭರತ್, ಕಿರಣ್ ಹಾಜರಿದ್ದರು.