ಮಡಿಕೇರಿ, ಮೇ ೨೭: ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಪ್ರಾಯೋಜಿತ ಸಮತೋಲಿತ ರಸಗೊಬ್ಬರ ಬಳಕೆಯೊಂದಿಗೆ ಕಾಳುಮೆಣಸು ಮತ್ತು ಏಲಕ್ಕಿಯ ವೈಜ್ಞಾನಿಕ ಕೃಷಿ ಹಾಗೂ ನರ್ಸರಿ ನಿರ್ವಹಣೆ ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವನ್ನು ಅಪ್ಪಂಗಳದ ಐ.ಸಿ.ಎ.ಆರ್ -ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಕಾಫಿ ಮಂಡಳಿ ಉಪನಿರ್ದೇಶಕ ಡಾ. ವಿ. ಚಂದ್ರಶೇಖರ್ ಉದ್ಘಾಟಿಸಿ ಮಾತನಾಡಿ, ಸಂಬಾರ ಬೆಳೆಗಳು ಹೆಚ್ಚಿನ ಮೌಲ್ಯ ಹೊಂದಿರುವ ವಾಣಿಜ್ಯ ಬೆಳೆಗಳಾಗಿದ್ದು, ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ.. ಪ್ರಸ್ತುತ ಇರುವ ರಸಗೊಬ್ಬರಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ಜೈವಿಕ ಗೊಬ್ಬರಗಳು ಮತ್ತು ಸಾವಯವ ಗೊಬ್ಬರಗಳಂತಹ ಪರ್ಯಾಯ ಪೋಷಕಾಂಶ ಮೂಲಗಳನ್ನು ಬಳಸುವಂತೆ ರೈತರಿಗೆ ಸಲಹೆ ನೀಡಿದರು. ಜೊತೆಗೆ, ನರ್ಸರಿ ಉದ್ಯಮಶೀಲತೆಯು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಮತ್ತು ಹೆಚ್ಚುವರಿ ಆದಾಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನೂ ಅವರು ಒತ್ತಿಹೇಳಿದರು.
ಹಿರಿಯ ವಿಜ್ಞಾನಿ, ಐ. ಸಿ.ಎ.ಆರ್.-ಐ.ಐ.ಎಸ್.ಆರ್. ಮುಖ್ಯಸ್ಥ ಡಾ. ಜಿ. ಎ. ರಾಜಣ್ಣ ಮಾತನಾಡಿ, ಭಾರತದಿಂದ ಸಂಬಾರ ಬೆಳೆಗಳ ರಫ್ತಿನ ಬಗ್ಗೆ ಕಿರುಪರಿಚಯವನ್ನು ನೀಡಿ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು, ಉತ್ತಮ ತಳಿಗಳ ಆಯ್ಕೆ, ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವದ ಬಗ್ಗೆ ವಿವರಿಸಿದರು. ಜೊತೆಗೆ, ಶಾಶ್ವತ ಕೃಷಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವೆಂದು ಮಾಹಿತಿ ನೀಡಿದರು.
ತಾಂತ್ರಿಕ ಅಧಿವೇಶನದಲ್ಲಿ ಐಸಿಎಆರ್-ಐಐಎಸ್‌ಆರ್ ವಿಜ್ಞಾನಿಗಳು ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು. ಹಿರಿಯ ವಿಜ್ಞಾನಿ ಡಾ. ಶಿವಕುಮಾರ್ ಎಂ. ಎಸ್. ಅವರು ಕಾಳುಮೆಣಸು ಮತ್ತು ಏಲಕ್ಕಿಯ ಸುಧಾರಿತ ತಳಿಗಳ ಕುರಿತು ಮಾತನಾಡಿದರು. ಹಿರಿಯ ವಿಜ್ಞಾನಿ ಡಾ. ಹೊನ್ನಪ್ಪ ಆಸಂಗಿ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ನರ್ಸರಿ ನಿರ್ವಹಣೆ ಹಾಗೂ ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳ ಕುರಿತು ವಿವರಿಸಿದರು. ಡಾ. ಜಿ. ಎ. ರಾಜಣ್ಣ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ನೀರಿನ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಡಾ. ಎಸ್. ಜೆ. ಅಂಕೇಗೌಡ, ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಅಂತರಬೆಳೆ ಪದ್ಧತಿ ಹಾಗೂ ಮಳೆಗಾಲದ ಕೃಷಿ ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು.
ತರಬೇತಿಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಸುಮಾರು ೮೦ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ರೈತರ ಪ್ರಯೋಜನಕ್ಕಾಗಿ ಸಂಸ್ಥೆಯು ಅಭಿವೃದ್ಧಿಪಡಿಸಿದ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.
ಹಿರಿಯ ವಿಜ್ಞಾನಿ ಡಾ. ಎಂ. ಎಸ್. ಶಿವಕುಮಾರ್ ಸ್ವಾಗತಿಸಿ, ಡಾ. ಅಕ್ಷಿತ ಹೆಚ್.ಜೆ. ವಂದಿಸಿದರು.