ಮಡಿಕೇರಿ, ಮೇ ೨೬: ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾ.೨೯ ಮತ್ತು ೩೦ರಂದು ಸುಂಟಿಕೊಪ್ಪದ ಎಸ್‌ಎಸ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾದ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದ್ದು,ಸಮ್ಮೇಳನಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಶೀದ್ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಗೌರವಾಧ್ಯಕ್ಷರಾಗಿದ್ದು, ಸಂಸದರು, ವಿಧಾನ ಪರಿಷತ್ ಸದಸ್ಯರು ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾ. ೨೯ರ ಬೆಳಿಗ್ಗೆ ೮ ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ರಾಷ್ಟ್ರ ಧ್ವಜವನ್ನು ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಕಸಾಪ ಅಧ್ಯಕ್ಷ ಕೇಶವ ಕಾಮತ್ , ಕನ್ನಡ ಧ್ವಜವನ್ನು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಆರೋಹಣ ಮಾಡಲಿದ್ದಾರೆ. ಸುಂಟಿಕೊಪ್ಪ ಪ್ರದೇಶದಲ್ಲಿ ಸಮಾಜ ಸೇವೆ ಮಾಡಿರುವ ಹಿರಿಯರ ನೆನಪಿಗಾಗಿ ೧೯ ದ್ವಾರಗಳನ್ನು ನಿರ್ಮಿಸಲಾಗಿದ್ದು, ಗಣ್ಯರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ೯ಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಎಸ್‌ಎಸ್ ಇಂಟರ್‌ನ್ಯಾಷನಲ್ ಹಾಲ್‌ನ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ಕಲಾತಂಡಗಳು, ಕಳಶ ಹೊತ್ತ ಮಹಿಳೆಯರು, ವಾದ್ಯ ತಂಡಗಳು, ಸ್ತ್ರೀಶಕ್ತಿ, ಸಂಜೀವಿನಿ, ಅಂಗನವಾಡಿ ಸದಸ್ಯರು, ಶಿಕ್ಷಕರು, ಜನಪ್ರತಿನಿಧಿಗಳನ್ನು ಒಳಗೊಂಡು ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ವಿಜಯ ಪ್ಲಾಂಟೇಷನ್‌ನ ಎಸ್.ಜಿ. ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ.
ಸಾಹಿತಿ ಡಿ.ಎನ್ ಕೃಷ್ಣಯ್ಯ ಮಹಾದ್ವಾರ, ಜಿ.ಟಿ ನಾರಾಯಣ್ ರಾವ್ ಪುಸ್ತಕ ಮಳಿಗೆ, ಛಾಯಾಗ್ರಾಹಕ ದಿ. ಬಿ.ಎಫ್. ಮೊಹಿದೀನ್ ಚಿತ್ರಕಲಾ ಪ್ರದರ್ಶನ ಮಳಿಗೆ, ದಿ. ಕಮಲ ಕರಿಯಪ್ಪ ಜ್ಞಾಪಕಾರ್ಥ ಸ್ತ್ರೀಶಕ್ತಿ ಮಳಿಗೆ, ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣ ಹಾಗೂ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪಂಜೆ ಮಂಗೇಶರಾಯರ ವೇದಿಕೆಯನ್ನು ಗಣ್ಯರು ಉದ್ಘಾಟನೆ ಮಾಡಲಿದ್ದಾರೆ ಎಂದು ಕೇಶವ ಕಾಮತ್ ತಿಳಿಸಿದರು.
ಸಮಾರಂಭ ಉದ್ಘಾಟನೆ
ಬೆಳಿಗ್ಗೆ ೧೦.೩೦ಕ್ಕೆ ನಾಡಗೀತೆ, ರೈತ ಗೀತೆ, ಕುಂಚಗಾಯನದೊAದಿಗೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಸಮ್ಮೇಳನದ ಸರ್ವಾಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಪ್ರಯುಕ್ತ ಹೊರ ತರಲಾಗುತ್ತಿರುವ”ಸಾಹಿತ್ಯ ಸೌಹಾರ್ದ” ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು ಬಿಡುಗಡೆ ಮಾಡಲಿದ್ದಾರೆ. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಶಾಸಕ ಎ.ಎಸ್ ಪೊನ್ನಣ್ಣ ಉಪಸ್ಥಿತರಿರುತ್ತಾರೆ.
ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ, ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಜಿ ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮುಖ್ಯ ಭಾಷಣ ಮಾಡಲಿದ್ದಾರೆ.
ಕೃತಿಗಳ ಲೋಕಾರ್ಪಣೆ
ಸಮ್ಮೇಳನದಲ್ಲಿ ಇ.ಸುಲೇಮಾನ್ ರಚಿತ ‘ರಾಗವಿಲ್ಲದ ಕವಿತೆ’, ಹೆಚ್. ಮಂಜುನಾಥ್ ಚಿರಕನಹಳ್ಳಿ ರಚಿತ ‘ಮನುಷ್ಯತ್ವದ ಸಾರ’, ಜಯಪ್ರಕಾಶ್ ಪುತ್ತೂರು ರಚಿತ ‘ವ್ಯಕ್ತಿತ್ವ ವಿಕಸನದ ವಿಚಾರ ಧಾರೆ’, ಡಾ. ಬೆಸೂರು ಮೋಹನ್ ಪಾಳೆಗಾರ್ ರಚಿತ ‘ಸ್ವಾತಂತ್ರ‍್ಯ ಕ್ರಾಂತಿಯ ಕಿಡಿ’, ಗಣೇಶ ಶರ್ಮ ರಚಿತ ‘ಮಕ್ಕಳ ಕಥೆ’, ಹೇಮಂತ್ ಪಾರೇರ ರಚಿತ ‘ಶಕುನದ ಹಕ್ಕಿ’, ಲಾವಣ್ಯ ಮೋಹನ್ ರಚಿತ ಛಾಯಾ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಕಸಾಪ ಅಧ್ಯಕ್ಷರು ಮಾಹಿತಿಯಿತ್ತರು.
ಮ. ೧ ಗಂಟೆಗೆ ಜಿಲ್ಲೆಯ ಗಾಯಕರಿಂದ ಕನ್ನಡ ಗೀತ ಗಾಯನ ನಡೆಯಲಿದೆ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅಧ್ಯಕ್ಷತೆ ವಹಿಸಲಿದ್ದು,ಪೊಲೀಸ್ ಉಪ ನಿರೀಕ್ಷಕ ಕೆ.ಎಸ್.ಧನಂಜಯ್ ಉದ್ಘಾಟಿಸಲಿದ್ದಾರೆ.
ವಿಚಾರಗೋಷ್ಠಿ
೨ ಗಂಟೆಗೆ ವೈದ್ಯ ಹಾಗೂ ಸಾಹಿತಿ ಡಾ. ಕೆ.ಬಿ ಸೂರ್ಯ ಕುಮಾರ್ ಅಧ್ಯಕ್ಷತೆಯ ವಿಚಾರಗೋಷ್ಠಿಯಲ್ಲಿ ಸಾಹಿತಿ ಕಾಜೂರು ಸತೀಶ್ ಆಶಯ ನುಡಿಯಾಡಲಿದ್ದಾರೆ. ‘ಕೊಡಗು ಕಂಡ ಮಹಿಳಾ ಸಾಹಿತಿಗಳು ಮತ್ತು ಅವರ ಕೃತಿಗಳು’ ಕುರಿತು ಸಾಹಿತಿ ಎನ್.ಕೆ ಮಾಲಾದೇವಿ ಮೂರ್ತಿ, ಪ್ರವಾಸೋದ್ಯಮ-ಕೈಗಾರಿಕೋದ್ಯಮದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯ ಕುರಿತು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ವನ್ಯಜೀವಿ ಉಪಟಳ-ಶಾಶ್ವತ ಪರಿಹಾರ ಕುರಿತು ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಎಸ್.ಜಿ ಉಮೇಶ್ ಉಪನ್ಯಾಸ ನೀಡಲಿದ್ದಾರೆ.
ಬಳಿಕ ದತ್ತಿ ಸ್ಥಾಪಿಸಿದ ೧೦ ದತ್ತಿದಾನಿಗಳು ಹಾಗೂ ತಾಲೂಕು-ಹೋಬಳಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು.ಮಡಿಕೇರಿ ಫೀ.ಮಾ.ಕಾರ್ಯಪ್ಪ ಕಾಲೇಜು ಉಪನ್ಯಾಸಕ ಶ್ರೀಧರ್ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು,ಹಿರಿಯ ಸಾಹಿತಿ ಶಂಷುದ್ದೀನ್ ಸನ್ಮಾನಿಸಲಿದ್ದಾರೆ. ಸಂಜೆ ೫.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,ನಿವೃತ್ತ ಲೆ.ಕ.ಬಿಜಿವಿ ಕುಮಾರ್ ಉದ್ಘಾಟಿಸಲಿದ್ದು,ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕೇಶವ ಕಾಮತ್ ತಿಳಿಸಿದರು.
ತಾ. ೩೦ರ ಕಾರ್ಯಕ್ರಮ
ತಾ.೩೦ರ ಬೆಳಿಗ್ಗೆ ೧೦ಕ್ಕೆ ಮಂಗಳೂರು ವಿವಿಯ ನಿವೃತ್ತ ಪ್ರೊ. ಕೋಡಿರ ಲೋಕೇಶ್ ಮೊಣ್ಣಪ್ಪ ಅಧ್ಯಕ್ಷತೆಯ ವಿಚಾರಗೋಷ್ಠಿಯಲ್ಲಿ ಶಕ್ತಿ ದಿನ ಪತ್ರಿಕೆ ಸಂಪಾದಕರಾದ ಜಿ.ಚಿದ್ವಿಲಾಸ್ ಆಶಯ ನುಡಿಯಾಡಲಿದ್ದಾರೆ. ‘ಕನ್ನಡ ಕಥಾ ಜಗತ್ತು ಮತ್ತು ಕೊಡಗು’ ಕುರಿತು ನಿವೃತ್ತ ಪ್ರಾಂಶುಪಾಲ ಡಾ.ಜೆ ಸೋಮಣ್ಣ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಚೆಟ್ಟಳ್ಳಿ ಕೃಷಿ ಪ್ರಯೋಗ ಕೇಂದ್ರದ ಮುಖ್ಯಸ್ಥ ಡಾ. ಮುರಳಿಧರ್, ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸಲು ದಾರಿ ಕುರಿತು ಲೇಖಕ ಆರ್.ಕೆ ಬಾಲಚಂದ್ರ, ‘ಕೊಡಗು ಕ್ರೀಡೆಯ ತವರೂರು-ಆಗಬೇಕಾದ ಅನುಕೂಲತೆಗಳು’ಕುರಿತು ಚೆಪ್ಪುಡಿರ ಕಾರ್ಯಪ್ಪ ಉಪನ್ಯಾಸ ನೀಡಲಿದ್ದಾರೆ.
ಕವಿಗೋಷ್ಠಿ
ಬೆ. ೧೧.೩೦ಕ್ಕೆ ಸಾಹಿತಿ ಕೃಪಾ ದೇವರಾಜ್ ಅಧ್ಯಕ್ಷತೆಯಲ್ಲಿ, ಸಾಹಿತಿ ಲಾವಣ್ಯ ಮೋಹನ್ ಆಶಯ ನುಡಿಯೊಂದಿಗೆ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ಇ. ಸುಲೇಮಾನ್, ಹೇಮಂತ್‌ಪಾರೇರ, ವಹಿದ್‌ಜಾನ್, ಪಿ.ಎಫ್. ಸಬಾಸ್ಟಿನ್, ದಿಲೀಶ್ ನಾಯರ್, ಬಿ.ಎಸ್. ಸತೀಶ್, ರಂಜಿತ್ ಕವಲಪಾರ, ವಿಜಯಲಕ್ಷಿö್ಮ ಮಂಜುನಾಥ್, ರಾಧಿಕಾ ವಿಶ್ವನಾಥ್, ಗೀತಾಂಜಲಿ ಮಹೇಶ್, ಕೆ. ಭಾಗೀರತಿ, ಸುನಿತಾ ವಿಶ್ವನಾಥ್, ಜಗದೀಶ್ ಜೋಡುಬೀಟಿ, ಶಾಫಿ ಅನ್ಸಾರಿ ಸಖಾಫಿ ಇತರರು ಕವನ ವಾಚಿಸಲಿದ್ದಾರೆ.ನಂತರ ಉದಯೋನ್ಮುಖ ಗಾಯಕರಿಂದ ಗೀತ ಗಾಯನ ನಡೆಯಲಿದ್ದು ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಯಕ ಉದಯ್ ನಂಜಪ್ಪ ಉದ್ಘಾಟಿಸಲಿದ್ದಾರೆ.ಬಳಿಕ ಬಹಿರಂಗ ಅಧಿವೇಶನದಲ್ಲಿ ಕೊಡಗಿನ ಸಮಸ್ಯೆಗಳ ನಿರ್ಣಯ ಮಂಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕಸಾಪ ಅಧ್ಯಕ್ಷರು ತಿಳಿಸಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೆ.ಪಿ ಬಾಲಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸನ್ಮಾನಿಸಲಿದ್ದು, ರಾಷ್ಟ್ರೀಯ ಫುಟ್ಬಾಲ್ ತೀರ್ಪುಗಾರ ಧೀರಜ್ ಕುಮಾರ್, ಅಂತರರಾಷ್ಟಿçÃಯ ಹಾಕಿ ತರಬೇತುದಾರರಾದ ಅಂಕಿತ ಸುರೇಶ್, ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ ನವನೀತ ಆದರ್ಶ್, ರಾಷ್ಟಿçÃಯ ಸೆಸ್ಟೋ ಬಾಲ್ ಆಟಗಾರರಾದ ಇರ್ಶಾಕ್ ಮುಸ್ತಫ, ಸಾಹಿಲ್ ಉಸ್ಮಾನ್ ಇವರುಗಳು ಸನ್ಮಾನ ಸ್ವೀಕರಿಸಲಿದ್ದಾರೆ. ಇವರುಗಳೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪಿ.ಎಸ್ ವೈಲೇಶ್, ಶಿಕ್ಷಣ ಕ್ಷೇತ್ರದಲ್ಲಿ ಹೆಚ್.ಕೆ ಕುಮಾರ್, ಜ್ಞಾನವಿಜ್ಞಾನ ವಿಭಾಗದಲ್ಲಿ ಟಿ.ಜಿ ಪ್ರೇಮ್ ಕುಮಾರ್, ಸೇನಾ ಕ್ಷೇತ್ರದಲ್ಲಿ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ ಕುಮಾರ್, ಸಹಕಾರ ಕ್ಷೇತ್ರದಲ್ಲಿ ಚಟ್ರಂಡ ಲೀಲಾ ಮೇದಪ್ಪ, ಸಮಾಜ ಸೇವೆಯಲ್ಲಿ ಚೋಕಂಡ ಸಂಜು ಸುಬ್ಬಯ್ಯ, ರಂಗಭೂಮಿಯಲ್ಲಿ ಭರಮಣ್ಣ ಬೆಟ್ಟಗೇರಿ, ಜನಸೇವೆಯಲ್ಲಿ ಜೆರ್ಮಿ ಡಿಸೋಜ, ಉದ್ಯಮದಲ್ಲಿ ಆರ್. ಶಾಂತರಾಮ್ ಕಾಮತ್, ಜನಪದ ಕ್ಷೇತ್ರದಲ್ಲಿ ಕುಡಿಯರ ಯಶೋಧ, ಗಾಯನದಲ್ಲಿ ಅನ್ವಿತ್ ಕುಮಾರ್, ನೃತ್ಯದಲ್ಲಿ ಏಂಜಲ್ ರಶ್ಮಿ, ಮಾಧ್ಯಮ ಕ್ಷೇತ್ರದಲ್ಲಿ ಬಿ.ಸಿ ದಿನೇಶ್, ಜಾನಪದ ಪರಿಕರ ವಿಭಾಗದಲ್ಲಿ ತೋಟಂಬೈಲು ಪಾರ್ವತಿ ಮೋಹನ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಚೆರಿಯಮನೆ ಪ್ರಶಾಂತ್, ನಾಟಿ ವೈದ್ಯದಲ್ಲಿ ವಿಶ್ವನಾಥ್ ರೈ, ಕೃಷಿಯಲ್ಲಿ ರಾಮಣ್ಣಗೌಡ, ನೈರ್ಮಲ್ಯದಲ್ಲಿ ಮುರುಗೇಶ್, ನಾಣ್ಯ-ಅಂಚೆ ಚೀಟಿ ಸಂಗ್ರಹದಲ್ಲಿ ಎಂ.ಎನ್ ಅಜಯ್ ರಾವ್ ಇವರುಗಳಿಗೆ ಜೀವಮಾನದ ಸಾಧನೆ ಗೌರವಾರ್ಪಣೆ ನಡೆಯಲಿದೆ.
ವಿಶೇಷ ಚೇತನ ಕ್ರೀಡಾಪಟು ಜಂಶೇದ್, ಯೋಗಾಸನದಲ್ಲಿ ಸುಮೇಶ್, ಹ್ಯಾಂಡ್‌ಬಾಲ್‌ನಲ್ಲಿ ನಿಷ್ಬಾ ಹಾಗೂ ಅಧ್ಯಾಪಕ ಶಿವರಾಜ್ ಇವರುಗಳನ್ನು ಸನ್ಮಾನಿಸಲಾಗುವುದು. ಬಾಲ ಪ್ರತಿಭೆಗಳಾದ ಭಾಷಣ ಕಲೆಯ ಶ್ರೀಶ, ಟೆನ್ನಿಸ್ ಪಟು ತನುಷ್ ಶೇಖರ್, ಯೋಗದಲ್ಲಿ ಸಿಂಚನ, ಗಾಯನದಲ್ಲಿ ಸುಮುಕ್, ಗಾಂಧಾರ ವಿದ್ಯೆಯ ಪ್ರದೋತ್ ಮತ್ತು ಕೆ.ಎಸ್ ಚಿನ್ಮಿತ್ ಇವರುಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಸಮಾರೋಪ
ಸಂಜೆ ೫ ಗಂಟೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು,ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು, ಶಾಸಕ ಡಾ. ಮಂತರ್ ಗೌಡ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಆಶಯ ನುಡಿಯಾಡಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಸಮಾರೋಪ ಭಾಷಣ ಮಾಡಲಿದ್ದಾರೆ.ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ,ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ , ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸುಂಟಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಕೇಶವ ಕಾಮತ್ ವಿವರಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಮಹಾತ್ಮ ಗಾಂಧಿಯವರನ್ನು ಕೊಡಗಿಗೆ ಕರೆ ತಂದಿದ್ದ, ಸುಂಟಿಕೊಪ್ಪಕ್ಕೆ ಹಾಗೂ ಕೊಡಗಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಗುಂಡುಗುಟ್ಟಿ ಮಂಜನಾಥಯ್ಯ ಅವರ ಹೆಸರನ್ನು ಸಮ್ಮೇಳನದ ಸಭಾಂಗಣಕ್ಕೆ ಇಡಲಾಗಿದೆ. ಕೊಡಗಿನ ನಾಡಗೀತೆ ಎಂದೆ ಖ್ಯಾತಿಯಾಗಿರುವ “ಎಲ್ಲಿ ಭೂರಮೆ.,” ಹಾಡನ್ನು ಬರೆದ ಪಂಜೆಮAಗೇಶರಾಯರ ಹೆಸರನ್ನು ಸಮ್ಮೇಳನದ ವೇದಿಕೆಗೆ ಇಡಲಾಗಿದೆ ಎಂದು ತಿಳಿಸಿದರು.ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಮಾತನಾಡಿ ಸಮ್ಮೇಳನದ ಯಶಸ್ಸಿಗಾಗಿ ಹಲವು ಉಪ ಸಮಿತಿಗಳನ್ನು ರಚಿಸಿ ಸಭೆಗಳನ್ನು ನಡೆಸಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.ಕಸಾಪ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸಬಾಸ್ಟಿನ್ ಮಾತನಾಡಿ ಸಮ್ಮೇಳನಕ್ಕಾಗಿ ಸುಂಟಿಕೊಪ್ಪ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಎಂದರು.
ಗೋಷ್ಠಿಯಲ್ಲಿ ಕಸಾಪ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್,ಸಮ್ಮೇಳನ ಸ್ಮರಣ ಸಂಚಿಕೆ ಸಂಪಾದಕ ಬಿ.ಸಿ.ದಿನೇಶ್ ಉಪಸ್ಥಿತರಿದ್ದರು.