ಮಡಿಕೇರಿ, ಮೇ ೨೬: ಹೊಲ ವೀಕ್ಷಣೆಗೆಂದು ತೆರಳಿದ್ದ ವ್ಯಕ್ತಿಯೋರ್ವರು ಸಿಡಿಲು ಬಡಿದು ದುರ್ಮರಣಕ್ಕೀಡಾಗಿರುವ ದುರ್ಘಟನೆ ಮೈಸೂರು ಬಳಿಯ ಇಲವಾಲದಲ್ಲಿ ಸಂಭವಿಸಿದೆ. ಮೂಲತಃ ಮಡಿಕೇರಿ ಬಳಿಯ ಹೆರವನಾಡು ಗ್ರಾಮ ನಿವಾಸಿ, ಮಡಿಕೇರಿಯ ಮುನೇಶ್ವರ ದೇವಾಲಯ ಬಳಿ ನೆಲೆಸಿದ್ದ ನಿವೃತ್ತ ಅಬಕಾರಿ ಇಲಾಖಾ ಅಧಿಕಾರಿಯಾಗಿದ್ದ ಹೊಸೋಕ್ಲು ದಿ. ಬಾಲಕೃಷ್ಣ ಅವರ ಪುತ್ರ ರೋಷನ್ ಮೃತ ದುರ್ದೈವಿ. ಐಟಿ ಉದ್ಯೋಗಿಯಾಗಿದ್ದ ರೋಷನ್ ಕೆಲಸ ತೊರೆದು ಸಹವರ್ತಿಯೊಂದಿಗೆ ಸೇರಿ ಆಧುನಿಕ ಕೃಷಿ ಪರಿಕರಗಳ ಪರಿಚಯ, ಮಾರಾಟ ವ್ಯವಸ್ಥೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದ್ದರು. ನಿನ್ನೆ ಸಂಜೆ ಇಲವಾಲದಲ್ಲಿರುವ ಹೊಲಕ್ಕೆ ಭೇಟಿ ನೀಡಿದ್ದ ಸಂದರ್ಭ ಆಕಸ್ಮಿಕವಾಗಿ ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಜೊತೆಯಲ್ಲಿದ್ದ ಮತ್ತೋರ್ವ ವ್ಯಕ್ತಿಗೂ ಘಾಸಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂತ್ಯಕ್ರಿಯೆ ಹೆರವನಾಡಿನಲ್ಲಿ ನಡೆಸಲಾಯಿತು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.