ಗೋಣಿಕೊಪ್ಪಲು, ಮೇ.೨೫: ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೫ ದಿನಗಳ ಕಾಲ ನಡೆದ ಆದಿವಾಸಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯ ಕಂಡಿತು. ಅಂತಿಮ ಹಣಾಹಣಿಯಲ್ಲಿ ಕುಟ್ಟದ ಸಿಂಕೋನ ಯೂತ್ ಕ್ಲಬ್ ಎ ತಂಡವು ಕುಟ್ಟದ ಸಿಂಕೋನ ಯೂತ್ ಕ್ಲಬ್ ಬಿ ತಂಡವನ್ನು ಸೋಲಿಸುವ ಮೂಲಕ ದಿ.ಶಶಿಕುಮಾರ್ ಜ್ಞಾಪಕಾರ್ಥವಾಗಿ ಏರ್ಪಡಿಸಲಾಗಿದ್ದ ಕ್ರಿಕೆಟ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತು. ಸಿಂಕೋನ ಯೂತ್ ಕ್ಲಬ್ ಬಿ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಮಹಿಳಾ ವಿಭಾಗದಲ್ಲಿ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟಿನ ರೆಡ್ ರೋರ‍್ಸ್ ಮಹಿಳಾ ತಂಡವು ತಿತಿಮತಿಯ ವಾರಿರ‍್ಸ್ ವುಮೆನ್ಸ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನಕ್ಕೆ ಭಾಜನವಾಯಿತು. ತಿತಿಮತಿಯ ವಾರಿರ‍್ಸ್ ವುಮೆನ್ಸ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಮಬಲ ಕಂಡು ಬಂತು ನಂತರ ಸೂಪರ್ ಓವರ್‌ನಲ್ಲಿ ರೆಡ್ ರೋರ‍್ಸ್ ಮಹಿಳಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೇ ಮೊದಲ ಬಾರಿಗೆ ಆದಿವಾಸಿ ಪುರುಷ ಹಾಗೂ ಮಹಿಳೆಯರಿಗಾಗಿ ಕ್ರಿಕೆಟ್ ಆಟಗಾರ ಆದಿವಾಸಿ ಯುವಕ ದಿ.ಶಶಿಕುಮಾರ್ ಜ್ಞಾಪಕಾರ್ಥವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ೬೭ ಪುರುಷರ ಹಾಗೂ ೧೧ ಮಹಿಳೆಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ನೀಡಲಾಯಿತು.
ಸಮಾರೋಪ ಸಮಾರಂಭವು ಸುಜಿನ್ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ರೀಡಾ ಕೂಟದ ಸಂಚಾಲಕರಾದ ಮುಸ್ತಫಾ ಹಾಗೂ ಅಪ್ರೋಸ್ ಅವರು ಪಂದ್ಯಾವಳಿಯ ಯಶಸ್ವಿಗೆ ಸಹಕರಿಸಿದ್ದನ್ನು ಆದಿವಾಸಿಗಳು ಪ್ರಶಂಸಿಸಿ, ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಯಮುಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಆಪಟ್ಟಿರ ಟಾಟೂ ಮೊಣ್ಣಪ್ಪ ಮಾತನಾಡಿ ಆದಿವಾಸಿಗಳು ಕ್ರೀಡೆಯೊಂದಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದೆ ಬರಬೇಕು. ಪ್ರತಿಭಾವಂತ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ನಿರ್ಮಾಣವಾಗಬೇಕು ಎಂದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್.ಪಂಕಜ ಮಾತನಾಡಿ ಆದಿವಾಸಿಗಳು ದುಶ್ಚಟಗಳಿಂದ ಹೊರ ಬಂದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ತಮ್ಮನ್ನು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಿತಿಮತಿ ಭಾಗದ ಆಶಾ ಕಾರ್ಯಕರ್ತರ ಉತ್ತಮ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಾನಿಗಳಾದ ಗೋಣಿಕೊಪ್ಪ ಮಂಜುನಾಥ್ ಬೇಕರಿಯ ಮಾಲೀಕರಾದ ರಾಜು, ಡ್ಯೂ ಡ್ರಾಫ್ ರೆಸಾರ್ಟ್ನ ಮಾಲೀಕರಾದ ಮಂಜೇಶ್,ತಿತಿಮತಿ ಗ್ರಾ.ಪಂ. ಮಾಜಿ ಸದಸ್ಯ ಎಂ.ಅಪ್ರೋಸ್, ಟಿ.ವೈ.ಉಮ್ಮರ್, ಶಾಂತಿ, ಮಣಿಯಮ್ಮ ಉಪಾಧ್ಯಕ್ಷೆ ರೋಹಿಣಿ, ಕಾರ್ಯದರ್ಶಿ ಶಿವಕುಮಾರ್,ಉಪಕಾರ್ಯದರ್ಶಿ ಅನಿಲ್ ಬಾಬು,ಖಜಾಂಜಿ ಸುಜಯ್, ಶಶಿಧರ್, ಸದಸ್ಯರಾದ ರಮಣಿ, ಭಾಗ್ಯ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾವಳಿಯ ಸಂಚಾಲಕ ಮುಸ್ತಫ ಸ್ವಾಗತಿಸಿ, ಸರಸ್ವತಿ ನಿರೂಪಿಸಿ ವಂದಿಸಿದರು.